ನವದೆಹಲಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೊರತುಪಡಿಸಿ ಕರ್ನಾಟಕದ ಇತರ ಭಾಗಗಳಲ್ಲಿ ಕಂಬಳ ನಡೆಸುವುದನ್ನು ಪ್ರಶ್ನಿಸಿ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್’ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ನ ನವೆಂಬರ್ 14ರ ಆದೇಶ ಪ್ರಶ್ನಿಸಿ ಪೆಟಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, ‘ಕಂಬಳ ಕ್ರೀಡೆಯನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು’ ಎಂದು ಪ್ರಶ್ನಿಸಿದೆ.
‘ಸಮಿತಿಯವರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಕೃತಿ ಪ್ರದರ್ಶಿಸಲು ಬಯಸಿದರೆ ತಪ್ಪೇನು? ರಾಜ್ಯದ ಇತರ ಭಾಗಗಳ ಜನರು ಈ ಸಂಸ್ಕೃತಿಯ ಪರಿಚಯ ಹೊಂದಲಿ’ ಎಂದು ನ್ಯಾಯಮೂರ್ತಿ ಮೆಹ್ತಾ ಅಭಿಪ್ರಾಯಪಟ್ಟರು.
ಆಗ ಪೆಟಾ ವಕೀಲರು, ‘ನಿರ್ದಿಷ್ಟ ಪ್ರದೇಶದ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ಆಯೋಜಿಸುವುದು ಒಪ್ಪುವಂತಹುದಲ್ಲ. ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಅನುಸಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರವೇ ಕಂಬಳವನ್ನು ಆಯೋಜಿಸಬೇಕಿದೆ’ ಎಂದರು.
‘ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡಬಾರದು. ಈ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ಪೆಟಾ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು.
‘ಬೇರಾವುದೇ ಜಿಲ್ಲೆಯಲ್ಲಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಹಿಂಸೆ ನೀಡಿದಂತಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಲಕ್ಷಾಂತರ ಜನ ಬರುತ್ತಾರೆ. ಇದಕ್ಕಾಗಿ ವಿಐಪಿ ಪಾಸ್ಗಳನ್ನು ವಿತರಿಸಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳು ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲೂ ಈ ಕ್ರೀಡೆ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ’ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
‘ಸುಮಾರು 300 ಕಿ.ಮೀ ದೂರದಿಂದ ತರಲಾಗುವ ದಣಿದ ಕೋಣಗಳನ್ನು ಸ್ಪರ್ಧೆಗೆ ಇಳಿಸಲಾಗುತ್ತದೆ. ಇದು ಪ್ರಾಣಿ ಹಿಂಸೆಯಾಗುತ್ತದೆ. ಆದ್ದರಿಂದ, ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರಿಗೆ ಟ್ರಕ್ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು’ ಎಂದು ಕೋರಲಾಗಿತ್ತು.


