ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಬ್ಬರ ಮುಗಿದು ಈಗ ಫಲಿತಾಂಶದ ಕುತೂಹಲ ಮನೆಮಾಡಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು (Exit Polls) ರಾಜ್ಯದಲ್ಲಿ ದೊಡ್ಡ ರಾಜಕೀಯ ಕಂಪನದ ಮುನ್ಸೂಚನೆ ನೀಡಿವೆ. ವಿಶೇಷವಾಗಿ ಗುರುವಾರ ಹೊರಬಿದ್ದ ‘ಟುಡೇಸ್ ಚಾಣಕ್ಯ’ ಸಮೀಕ್ಷೆಯು ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದೆ.
ಒಟ್ಟು 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು 147 ಸ್ಥಾನಗಳ ಅಗತ್ಯವಿದ್ದು, ಚಾಣಕ್ಯ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿಯು 192 (± 11) ಸ್ಥಾನಗಳಲ್ಲಿ (ಸ್ಪಷ್ಟ ಬಹುಮತ) ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷವು 100 (± 11) ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಅದು ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದೆ. ಇತರರು 0-2 (± 02) ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಹೇಳಿದೆ.
ಮತ ಹಂಚಿಕೆ ಪ್ರಮಾಣ
ಮತ ಹಂಚಿಕೆಯಲ್ಲಿ ಬಿಜೆಪಿ ಶೇ. 48 ರಷ್ಟು ಮತಗಳನ್ನು ಪಡೆಯುವ ಮೂಲಕ ಟಿಎಂಸಿಗಿಂತ (ಶೇ. 38) ಶೇ. 10 ರಷ್ಟು ಹೆಚ್ಚಿನ ಮತಗಳನ್ನು ಪಡೆಯಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.
ಮತ ಹಂಚಿಕೆಯಲ್ಲಿ, ಬಿಜೆಪಿ 48% ± 3% ಪಡೆಯುವ ಮೂಲಕ ಮುನ್ನಡೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ, ನಂತರ ಟಿಎಂಸಿ+ 38% ± 3% ಪಡೆಯಬಹುದು. ಇದು ಎರಡು ಪ್ರಮುಖ ಸ್ಪರ್ಧಿಗಳ ನಡುವಿನ ಗಣನೀಯ ಅಂತರವನ್ನು ಪ್ರತಿಬಿಂಬಿಸುತ್ತದೆ. ಇತರ ಪಕ್ಷಗಳು 14% ± 3% ಮತಗಳನ್ನು ಪಡೆಯುತ್ತವೆ ಎಂದು ಸಮೀಕ್ಷೆ ಅಂದಾಜಿಸಿದೆ.
ಇದು ಬಿಜೆಪಿ ತೃಣಮೂಲ ಕಾಂಗ್ರೆಸ್ಸಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿರುವ ಐದನೇ ಎಕ್ಸಿಟ್ ಪೋಲ್ ಆಗಿದೆ. ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಬಿಜೆಪಿ 146–161 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಟಿಎಂಸಿ 125–140 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಪಿ-ಮಾರ್ಕ್ ಬಿಜೆಪಿ 150–175 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದ್ದರೆ, ಟಿಎಂಸಿಯನ್ನು 118–138 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.
!
ಆದರೆ ‘ಪೀಪಲ್ಸ್ ಪಲ್ಸ್’ ಸಂಸ್ಥೆಯು ಮಮತಾ ಬ್ಯಾನರ್ಜಿ ಅವರ ಟಿಎಂಸಿ 177-187 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.
ಅಂತಿಮ ತೀರ್ಪು ಮೇ 4 ರಂದು:
ರಾಜ್ಯದಲ್ಲಿ ಈ ಬಾರಿ ದಾಖಲೆಯ ಶೇ. 90ಕ್ಕೂ ಹೆಚ್ಚು ಮತದಾನವಾಗಿದ್ದು, ಇದು ಆಡಳಿತ ವಿರೋಧಿ ಅಲೆಯೋ ಅಥವಾ ಸರ್ಕಾರದ ಪರ ಒಲವೋ ಎಂಬುದು ಮೇ 4ರ ಭಾನುವಾರ ಹೊರಬೀಳುವ ಅಂತಿಮ ಫಲಿತಾಂಶದಲ್ಲಿ ತಿಳಿಯಲಿದೆ. ಒಂದು ವೇಳೆ ಸಮೀಕ್ಷೆಗಳು ನಿಜವಾದರೆ, ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಂತಾಗುತ್ತದೆ.
