ವಾಷಿಂಗ್ಟನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಜೀವಂತವಾಗಿದ್ದಾರೆ ಮತ್ತು ಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದರೆ, ತೀವ್ರ ಸ್ವರೂಪದ ಗಾಯಗಳಿಂದಾಗಿ ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದು, ಸದ್ಯಕ್ಕೆ ಮಾತನಾಡಲು ಅಥವಾ ಓಡಾಡಲು ಅಶಕ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಕೊಲ್ಲಲ್ಪಟ್ಟರು. ಈ ದಾಳಿಯಲ್ಲಿ ಅವರ ಕುಟುಂಬದ ಹಲವು ಸದಸ್ಯರು ಮೃತಪಟ್ಟಿದ್ದರು. ಈ ಘಟನೆಯ ಆರು ವಾರಗಳ ನಂತರ ಮೊಜ್ತಬಾ ಖಮೇನಿ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡರು.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮೊಜ್ತಬಾ ಅವರ ಮುಖ ಮತ್ತು ತುಟಿಗಳು ತೀವ್ರವಾಗಿ ಸುಟ್ಟಿವೆ. ಅವರ ಒಂದು ಕಾಲಿಗೆ ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳಾಗಿದ್ದು, ಕೃತಕ ಕಾಲಿನ (prosthetic) ನಿರೀಕ್ಷೆಯಲ್ಲಿದ್ದಾರೆ. ಕೈಗೂ ಶಸ್ತ್ರಚಿಕಿತ್ಸೆ ನಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರವಾಗಿ ಸುಟ್ಟಿರುವ ಮುಖ ಮತ್ತು ತುಟಿಗಳ ಕಾರಣ ಅವರಿಗೆ ಮಾತನಾಡಲು ಕಷ್ಟವಾಗುತ್ತಿದೆ. ಹೀಗಾಗಿ ಅವರಿಗೆ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಸರ್ಜರಿ (Plastic Surgery) ನಡೆಯುವ ಸಾಧ್ಯತೆಯಿದೆ.
ಆಡಳಿತ ಮತ್ತು ಸಂವಹನ ನಡೆಯುತ್ತಿರುವುದು ಹೇಗೆ?
ಪ್ರಸ್ತುತ ಮೊಜ್ತಬಾ ಖಮೇನಿ ಅವರು ವೈದ್ಯರ ಕಠಿಣ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುತ್ತಿಲ್ಲ. ಬದಲಾಗಿ, ಮೊಹರು ಮಾಡಿದ ಹಸ್ತಪ್ರತಿ (Handwritten) ಸಂದೇಶಗಳ ಮೂಲಕ ಸಂವಹನ ನಡೆಸುತ್ತಿದ್ದಾರೆ. ಈ ಸಂದೇಶಗಳನ್ನು ನಂಬಿಕಸ್ತ ಜನರ ಮೂಲಕ ಮೂಲಕ ರಹಸ್ಯವಾಗಿ ರವಾನಿಸಲಾಗುತ್ತಿದೆ.
ಚಾಥಮ್ ಹೌಸ್‌ನ ಸನಮ್ ವಕೀಲ್ ಅವರ ಪ್ರಕಾರ, ಮೊಜ್ತಬಾ ಅವರು ಇನ್ನೂ ಪೂರ್ಣ ಪ್ರಮಾಣದ ನಿಯಂತ್ರಣ ಹೊಂದಿಲ್ಲ. ಅಧಿಕಾರಿಗಳು ಈಗಾಗಲೇ ತೆಗೆದುಕೊಂಡ ನಿರ್ಧಾರಗಳಿಗೆ ಅವರು ಕೇವಲ ಸಹಿ ಹಾಕುತ್ತಿದ್ದಾರೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಸ್ವತಃ ಹೃದಯ ಶಸ್ತ್ರಚಿಕಿತ್ಸಕರಾಗಿದ್ದು, ಆರೋಗ್ಯ ಸಚಿವರ ಜೊತೆಗೂಡಿ ಮೊಜ್ತಬಾ ಅವರ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸದ್ಯದ ಅವರ ದೈಹಿಕ ಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ, ಇರಾನ್‌ನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸದ್ಯಕ್ಕೆ ಸೇನಾ ನಾಯಕರಿಗೆ ವಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಸದ್ಯದ ಅವರ ದೈಹಿಕ ಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಿಧಾನವಾಗಿದ್ದು, ಆಡಳಿತದಲ್ಲಿ ಮಧ್ಯವರ್ತಿಗಳ ಪಾತ್ರ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಖಮೇನಿ ಅವರು, ಪ್ರಾಥಮಿಕ ಅಧಿಕಾರವನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ವಹಿಸಿದ್ದಾರೆಂದು ತಿಳಿದುಬಂದಿದೆ.
ಇರಾನ್‌ನ ಅತ್ಯಂತ ಶಕ್ತಿಶಾಲಿ ಭದ್ರತಾ ಸಂಸ್ಥೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈಗ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ದೇಶದಲ್ಲಿ ಶಕ್ತಿಯ ಕೇಂದ್ರೀಕರಣ ಬದಲಾಗುತ್ತಿದೆ.
“ಸೇನಾ-ಕೇಂದ್ರಿತ ಆಡಳಿತ ವ್ಯವಸ್ಥೆ” ರೂಪುಗೊಳ್ಳುತ್ತಿದೆ ಎಂಬ ವರದಿಗಳಿವೆ.
