ಹುಬ್ಬಳ್ಳಿ: ಕುಂದಗೋಳ ಪಂಚಗೃಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮಿಗಳು ಮಠದ ಆಸ್ತಿ ಮಾರಾಟ ಮಾಡುವ ಭರಾಟೆಯಲ್ಲಿ ಸತ್ಯ ಸಂಗತಿಗಳನ್ನು ಅಲ್ಲಗಳೆದಿರುವುದು ಅವರ ಹತಾಶ ಮನೋಭಾವನೆಗೆ ಸಾಕ್ಷಿಯಾಗಿದೆ ಎಂದು ಶ್ರೀ ಮತ್ ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ಸ್ಪಷ್ಟಪಡಿಸಿದರು.
ಮಂಗಳವಾರ ವಿದ್ಯಾನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಸತ್ಯ ಸಂಗತಿಗಳನ್ನು ವಿವರಿಸಿದ ಜಗದ್ಗುರುಗಳು ವೀರಶೈವ ಧರ್ಮದಲ್ಲಿ ಒಂದು ಉತ್ಕøಷ್ಟ ಪರಂಪರೆ-ಸಂಪ್ರದಾಯವಿದೆ. ಕುಂದಗೋಳ ಪಂಚಗೃಹ ಹಿರೇಮಠ ಶ್ರೀ ಕಾಶೀ ಮಹಾಪೀಠದ ಶಾಖಾ ಮಠವಾಗಿದ್ದು ನಾವೇ ಸಾನ್ನಿಧ್ಯ ವಹಿಸಿ ಅವರಿಗೆ ಪಟ್ಟಾಧಿಕಾರ ಮಾಡಿದ್ದನ್ನು ಅವರು ಇಷ್ಟು ಬೇಗನೇ ಮರೆತಿರುವುದು ಖೇದದ ಸಂಗತಿ. ಆಯಾ ಮಠಗಳ ಸ್ಥಿರ ಚರ ಆಸ್ತಿಗಳಿಗೆ ಆಯಾ ಮಠಗಳ ಶ್ರೀಗಳವರಿಗೆ ಸಂಬಂಧಿಸಿದ್ದರೂ ಕೆಲವು ಸಂದರ್ಭದಲ್ಲಿ ಮಠದ ಪದ್ಧತಿ ಪರಂಪರೆಯಂತೆ ನಡೆಯದೇ ಇದ್ದಾಗ ಸ್ವೇಚ್ಛಾಚಾರಿಗಳಾಗಿ ಮಠದ ಆಸ್ತಿ ಪರಭಾರೆ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಅಧಿಕಾರ ಮೂಲ ಪೀಠಗಳಿಗೆ ಇದ್ದೇ ಇರುತ್ತದೆ. ಈಗಾಗಲೇ ಶ್ರೀಗಳು ಧಾರವಾಡ ನಗರದಲ್ಲಿರುವ ಮತ್ತು ಕುಂದಗೋಳ ಪಟ್ಟಣದಲ್ಲಿರುವ ಮಠದ ಆಸ್ತಿಗಳನ್ನು ಮಾರಾಟ ಮಾಡಿ ಹಣವನ್ನು ಅಪವ್ಯಯ ಮಾಡಿದ್ದಾರೆ. ಆದರೂ ಪೀಠ ಮತ್ತು ಭಕ್ತರು ಯಾರೂ ವಿರೋಧಿಸಿಲ್ಲ. ಇದೀಗ ಮಠಕ್ಕೆ ಉಳಿದಿರುವ 52 ಎಕರೆ ಫಲವತ್ತಾದ ಭೂಮಿಯನ್ನು ಎನ್.ಎ. ಆಗಿ ಪರಿವರ್ತಿಸಲು ಮುಂದಾಗಿ ಮಾರಾಟ ಮಾಡುವ ಹುನ್ನಾರ ಹೊಂದಿರುವುದು ತಿಳಿದು ಬಂದಿರುತ್ತದೆ. ಈ ನಿರ್ಧಾರದಿಂದ ಶ್ರೀಗಳು ಹಿಂದೆ ಸರಿಯದಿದ್ದರೆ ಅವರನ್ನು ಮಠದಿಂದ ಪದಚ್ಯುತಗೊಳಿಸಿ ಮತ್ತೊಬ್ಬ ನೂತನ ಪಟ್ಟಾಧ್ಯಕ್ಷರಿಗೆ ಅಧಿಕಾರ ವಹಿಸಿ ಕೊಡಬೇಕಾಗುತ್ತದೆ. ಕುಂದಗೋಳ ಪಂಚಗೃಹ ಹಿರೇಮಠ ಪುತ್ರ ವರ್ಗ ಮಠವಲ್ಲ. ಇದು ಶಿಷ್ಯ ವರ್ಗ ಪರಂಪರೆಯ ಕಾಶೀ ಮಹಾಪೀಠದ ಶಾಖಾ ಮಠವಾಗಿದೆ. ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಮ್ಮ ವಂಶಕ್ಕೆ ಇನ್ನೊಂದು ಅವಕಾಶ ಕೊಡಬೇಕೆಂದು ಬಿನ್ನವಿಸಿದಾಗ ಅದಕ್ಕೆ ಸಮ್ಮತಿಸಿ ಶಿತಿಕಂಠ ಶಿವಾಚಾರ್ಯರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಶ್ರೀಗಳು ತಮ್ಮ ನಡೆ ನುಡಿಗಳನ್ನು ತಿದ್ದಿಕೊಳ್ಳದೇ ಇದ್ದರೆ ಮುಂದಿನ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಶ್ರೀ ಕಾಶೀ ಜಗದ್ಗುರುಗಳು ಸ್ಪಷ್ಟಪಡಿಸಿದರು. ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ್ತು ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಪಾಲ್ಗೊಂಡಿದ್ದರು.
