ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ, ಭಾರತ ಮತ್ತು ಇರಾನ್ ನಡುವೆ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜತಾಂತ್ರಿಕ ಒಪ್ಪಂದ ಏರ್ಪಟ್ಟಿದೆ. ಇದರ ಫಲವಾಗಿ, ಸುಮಾರು 40,000 ಮೆಟ್ರಿಕ್ ಟನ್ ಅಡುಗೆ ಅನಿಲ (LPG) ಹೊತ್ತ ‘ಶಿವಾಲಿಕ’ ಹೆಸರಿನ ಬೃಹತ್ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಮುಂದಿನ 7 ದಿನಗಳಲ್ಲಿ ಭಾರತದ ಕರಾವಳಿಯನ್ನು ತಲುಪಲಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಇದೇ ಹಾದಿಯಲ್ಲಿ ಮತ್ತೊಂದು ಹಡಗು ಕೂಡ ಬರಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಭಾರತಕ್ಕೆ ತಲುಪಲಿದೆ ಎಂದು ವರದಿಯಾಗಿದೆ.
ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆಯೂ ಭಾರತೀಯ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿದೆ. ಇರಾನ್ ಮತ್ತು ಭಾರತದ ನಡುವೆ ನಡೆದ ಹಲವಾರು ಸುತ್ತಿನ ಮಾತುಕತೆಗಳ ನಂತರ ಈ ಬೆಳವಣಿಗೆ ನಡೆದಿದೆ. ವಿಶೇಷವಾಗಿ, ಗುರುವಾರ ಪ್ರಧಾನಿ ಮೋದಿ ಮತ್ತು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರ ನಡುವೆ ನಡೆದ ಮಾತುಕತೆಯು ಈ ಪ್ರಕ್ರಿಯೆಗೆ ವೇಗ ನೀಡಿದೆ.
‘ಶಿವಾಲಿಕ’ ಹಡಗು ಇರಾನ್ನ ಬಂದರ್ ಅಬ್ಬಾಸ್ ಬಂದರಿನಿಂದ ಹೊರಟು ಕೆಲವು ಗಂಟೆಗಳ ಹಿಂದೆಯಷ್ಟೇ ಹಾರ್ಮುಜ್ ಜಲಸಂಧಿಯನ್ನು ದಾಟಿದೆ ಎಂದು ವರದಿಗಳು ತಿಳಿಸಿವೆ. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಇರಾನ್ ಈ ಮಾರ್ಗದಲ್ಲಿ ನಿರ್ಬಂಧ ಹೇರಿತ್ತು. ಪ್ರಸ್ತುತ ಈ ಹಡಗಿಗೆ ಭಾರತೀಯ ನೌಕಾಪಡೆಯು ಭದ್ರತೆಯನ್ನು ಒದಗಿಸುತ್ತಿದೆ. ವಿಶ್ವದ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಮತ್ತು ಇಂಧನ ಬೆಲೆಗಳು ಗಗನಕ್ಕೇರಿದ್ದವು. ಆದರೆ, ಭಾರತದಲ್ಲಿರುವ ಇರಾನ್ನ ಪ್ರತಿನಿಧಿಯು ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಮತ್ತು ಕೆಲವು ಹಡಗುಗಳು ಸಂಚರಿಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ-ಇರಾನ್ ಸ್ನೇಹ ಹಸ್ತ:
ಭಾರತಕ್ಕೆ ಸುರಕ್ಷಿತ ಹಾದಿ ಕಲ್ಪಿಸುವ ಕುರಿತು ಸಕಾರಾತ್ಮಕವಾಗಿ ಮಾತನಾಡಿದ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ, “ಭಾರತವು ನಮ್ಮ ಸ್ನೇಹಿತ ರಾಷ್ಟ್ರವಾಗಿದೆ. ಇದನ್ನು ನೀವು ಮುಂದಿನ ಎರಡೂವರೆ ಗಂಟೆಗಳಲ್ಲಿ ನೋಡಲಿದ್ದೀರಿ. ಈ ಪ್ರದೇಶದಲ್ಲಿ ಇರಾನ್ ಮತ್ತು ಭಾರತವು ಸಮಾನ ಹಿತಾಸಕ್ತಿಗಳನ್ನು ಹೊಂದಿವೆ ಎಂದು ನಾವು ನಂಬುತ್ತೇವೆ,” ಎಂದು ಹೇಳಿದ್ದಾರೆ.
“ಭಾರತದ ಜನರ ನೋವು ನಮ್ಮ ನೋವು ಮತ್ತು ಪ್ರತಿಯಾಗಿ ನಮ್ಮ ನೋವು ಭಾರತದ ನೋವು. ಮತ್ತು ಈ ಕಾರಣಕ್ಕಾಗಿ, ಭಾರತ ಸರ್ಕಾರ ನಮಗೆ ಸಹಾಯ ಮಾಡುತ್ತಿದೆ, ಮತ್ತು ನಾವು ಭಾರತ ಸರ್ಕಾರಕ್ಕೆ ಸಹಾಯ ಮಾಡಬೇಕು ಏಕೆಂದರೆ ನಮಗೆ ಸಾಮಾನ್ಯ ಹಿತಾಸಕ್ತಿ ಇದೆ,” ಎಂದು ಅವರು ಹೇಳಿದರು.
ಇರಾನ್ನ ಸರ್ವೋಚ್ಚ ನಾಯಕರ ಪ್ರತಿನಿಧಿಯಾಗಿರುವ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಮಾತನಾಡಿ, “ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಉದ್ದೇಶ ಇರಾನ್ ಗೆ ಯಾವತ್ತೂ ಇರಲಿಲ್ಲ. ಸಂಘರ್ಷದ ಕಾರಣದಿಂದ ನೌಕಾಯಾನದಲ್ಲಿ ಕೆಲವು ತೊಂದರೆಗಳು ಎದುರಾಗಿವೆಯೇ ಹೊರತು, ಜಲಸಂಧಿಯನ್ನು ಮುಚ್ಚಿಲ್ಲ. ಈಗಲೂ ಕೆಲವು ಹಡಗುಗಳು ಸಂಚರಿಸುತ್ತಿವೆ,” ಎಂದು ಭರವಸೆ ನೀಡಿದ್ದಾರೆ.


