ಬೆಳಗಾವಿ: ಇಂದಿನ ಸಂಘರ್ಷಮಯ ಬದುಕಿನಲ್ಲಿ ಮಹಿಳೆಯರ ಹೋರಾಟ ಹಾಗೂ ತಮ್ಮ ಸಂತೃಪ್ತ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎಲ್ಲವೂ ಸಹಜ ಎಂಬಂತೆ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಸಹಜ ಗುಣವಾಗಿದೆಯೆಂದು ಖ್ಯಾತ ಪರಿಸರ ತಜ್ಞೆ ಹಾಗೂ ವಿದುಷಿ ರೇವತಿ ಕಾಮತ್ ಹೇಳಿದ್ದಾರೆ.
“ನಾನು ನಮ್ಮವರೊಂದಿಗೆ” ಫೌಂಡೇಶನ್ ಜೆಎನ್ಎಂಸಿ ಆವರಣದಲ್ಲಿರುವ ಡಾ ಎ.ಬಿ. ರಾಜಶೇಖರ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ, ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಅವಳ ನಿರಂತರ ಸಂಘರ್ಷ ಬಹಳ ಮಹತ್ವದ್ದಾಗಿದೆಯೆಂದು ಹೇಳಿದರು.
ಖ್ಯಾತ ರಂಗ ಕಲಾವಿದೆ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಮಾತನಾಡಿ, ತೆರೆದ ಕಣ್ಣುಗಳಿಂದ ಕಂಡ ಕನಸ್ಸನ್ನು ನನಸಾಗಿಸುತ್ತೇನೆ ಎಂಬ ಛಲ ಹಾಗೂ ಆತ್ಮವಿಶ್ವಾಸ ಮಹಿಳೆಯರಲ್ಲಿದ್ದಾಗ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆ ಸಾಧ್ಯ ಎಂದು ಶ್ಲಾಘಿಸಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ, ಭರತೇಶ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಫೌಂಡೇಶನ್ ಸಂಸ್ಥಾಪಕಿ ಸರ್ವಮಂಗಳಾ ಅರಳಿಮಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ನೆರವೇರಿಸಿದರು.
ಮಹಿಳಾ ಉದ್ಯಮಿ ನೀಲಂ ಗುತ್ತಿಗೊಳಿ, ಲೀನಾ ಪಡಿಹಾರ, ದಾನೇಶ್ವರಿ ಪಡೆಕರ, ಅನ್ನಪೂರ್ಣಾ ಅಗಡಿ, ವಿನೋದ ದೊಡ್ಡಣ್ಣವರ, ಉಪೇಂದ್ರ ಕುಮಾರ ಕೆ.ಆರ್. ಭೂವಿಜ್ಞಾನಿ ಬಿಂದನಾ ಪಾಟೀಲ ಅವರಿಗೆ ನಮ್ಮವರ ಅಭಿಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳಗಾವಿಯ 20 ಜನ ವೀಣಾ ಕಲಾವಿದರಿಂದ ವೀಣಾ ವಾದನ ಮಹೋತ್ಸವ ನೆರೆವೇರಿತು.
ಭಾಗ್ಯಶ್ರೀ ಭೈರಪ್ಪನ್ನವರ, ಜ್ಯೋತಿ ಬದಾಮಿ, ರಾಜನಂದಾ ಗಾರಗಿ, ಮಾಧುರಿ ಹಿರೇಮಠ, ಆಶಾ ಹೊಸಮನಿ, ಅಂಜನಾ ಹಿರೇಮಠ, ಆರತಿ ನಿಪ್ಪಾಣಿಕರ, ಬೀನಾ ಕತ್ತಿ, ವಿಜಯಲಕ್ಷ್ಮಿ ಪಾಟೀಲ, ಲಲಿತಾ ಹೂಗಾರ, ವೀಣಾ ಪೂಜಾರ ಮತ್ತಿತರರು ಪಾಲ್ಗೊಂಡು ಮಹಿಳಾ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.


