ಧಾರವಾಡ: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 16 ಜನ ತಪ್ಪಿತಸ್ಥರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ ಏಳು ವರ್ಷ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದರು.
ಶುಕ್ರವಾರ ನ್ಯಾಯಾಲಯದಲ್ಲಿ ಎಲ್ಲಾ ಅಪರಾಧಿಗಳನ್ನೂ ಪೊಲೀಸರು ಹಾಜರುಪಡಿಸಿದರು. ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು.
ಪ್ರಕರಣದಲ್ಲಿನ 17 ಆರೋಪಿಗಳನ್ನು ‘ಅಪರಾಧಿಗಳು’ ಎಂದು ಬುಧವಾರ ನಿರ್ಣಯಿಸಿದ್ದ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು, ಶುಕ್ರವಾರ ಶಿಕ್ಷೆಯ ಪ್ರಮಾಣ ನಿರ್ಧರಿಸಿ ಘೋಷಿಸಿದರು.
ಶಿಕ್ಷೆಯ ಪ್ರಮಾಣ ನಿರ್ಧರಿಸುವ ಕುರಿತು ಗುರುವಾರ ನಡೆದ ವಿಚಾರಣೆಯಲ್ಲಿ ಕಾನೂನಿನ ತತ್ವಗಳಿಗೆ ಅನುಗುಣವಾಗಿ ಗರಿಷ್ಠ ಶಿಕ್ಷೆಗೆ ವಿನಾಯ್ತಿ ಕೋರುವ ಅಪರಾಧಿಗಳ ಮನವಿಯನ್ನು ನ್ಯಾಯಾಧೀಶರು ಆಲಿಸಿದ್ದರು.


