ರಾಯಚೂರು: ಮಂತ್ರಾಲಯ ಸಮೀಪದ ಚಿಲಕಣಡೋಣ ಬಳಿ ಗುರುವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಎಂಟು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾರುಬೂದಿ ಟ್ಯಾಂಕರ್ ಮತ್ತು ಪಿಕ್ ಅಪ್ ವಾಹನದ ನಡುವೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಘಟಿಸಿದ್ದು, ಐವರು ಮಹಿಳೆಯರು, ಚಾಲಕ ಸೇರಿ ಇಬ್ಬರು ಪುರುಷರು, ಒಂದು ಮಗು ಮೃತಪಟ್ಟಿದೆ. ಇನ್ನೂ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಕರ್ನೂಲ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.
ಸುಮಾರು 21 ಜನ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಬರುತ್ತಿದ್ದರು ಎಂದು ತಿಳಿದು ಬಂದಿದೆ. ಮೃತಪಟ್ಟವರಲ್ಲಿ ಚಿಕ್ಕಮಗಳೂರು ಸಮೀಪದ ಕಣನಾಯಕನಹಳ್ಳಿಯ ಕುಮಾರ (50), ದೀಪಿಕಾ (40), ಬೆಳ್ಳಿ (5), ಬೇಲೂರು ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಸುನೀಲ್ (40), ಯಶೋದಾ( 60), ಲೋಲಾಕ್ಷಿ, ಉದ್ದೇವ ಗ್ರಾಮದ ಪುಟ್ಟಮ್ಮ (55), ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
9 ಮಂದಿ ಗಾಯಗೊಂಡಿದ್ದು, ಕರ್ನೂಲ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.


