ಬೆಳಗಾವಿ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಆವರಣದೊಳಗೆ ಸೂಕ್ತ ಸ್ಥಳದಲ್ಲಿ ಮರು ಸ್ಥಾಪಿಸುವಂತೆ ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಮುಂಜಾನೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸದ್ಯ ಮುಖ್ಯ ದ್ವಾರದ ಬಳಿ ಕೂಡಿಸಲು ಸಿದ್ಧತೆ ಮಾಡಲಾಗಿದೆ. ಈ ಸ್ಥಳವು ಜಿಲ್ಲಾಧಿಕಾರಿ ಕಚೇರಿಯ ಮುಂದಿನ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಶೀಘ್ರವೇ ರಸ್ತೆ ಮೇಲು ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಮತ್ತೆ ಹಲ್ಮಿಡಿ ಶಾಸನದ ಸ್ಥಳಾಂತರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಧ್ವಜದ ಕಟ್ಟೆಯ ಸಮೀಪವೇ ತಳ ಕಟ್ಟೆಯನ್ನು ಸುಂದರವಾಗಿ ನಿರ್ಮಿಸಿ, ಸುತ್ತಲೂ ಸರಪಳಿ ಹಾಕಿ ಹಲ್ಮಿಡಿ ಶಾಸನವನ್ನು ಪೂರ್ವಾಭಿಮುಖವಾಗಿ ಕೂಡಿಸುವಂತೆ ತಿಳಿಸಲಾಯಿತು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಸರ್ವೋದಯ ಸಂಘಟನೆ ಅಧ್ಯಕ್ಷ ಶ್ರೀನಿವಾಸ ತಾಳೂಕರ ಹಾಗೂ ಗಡಿನಾಡು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಮುಂತಾದವರು ಉಪಸ್ಥಿತರಿದ್ದರು.


