ಕಲಬುರಗಿ: ಸೂರ್ಯನಗರಿ ಎಂದೇ ಹೆಸರಾಗಿರುವ ಕಲಬುರಗಿಯಲ್ಲಿ ಏಪ್ರಿಲ್ 14ರಂದು ರಾಜ್ಯದಲ್ಲೇ ಅತ್ಯಧಿಕವಾದ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ತೀವ್ರ ಬಿಸಿಗಾಳಿಯ ಹಿನ್ನೆಲೆ ಜಿಲ್ಲೆಯಲ್ಲಿ ಉಷ್ಣಾಂಶವು ಗಣನೀಯವಾಗಿ ಹೆಚ್ಚಿದೆ. ಜನಜೀವನದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ 17ರವರೆಗೆ ಜಿಲ್ಲೆಯಲ್ಲಿ ಹೀಟ್ ವೇವ್ ಇರುವ ಸಾಧ್ಯತೆಗಳಿದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಏಪ್ರೀಲ್ 15 ರಿಂದ 17ರ ವರೆಗೆ ಬಿಸಿ ಗಾಳಿ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹಮಾಮಾನ ಇಲಾಖೆಯು ಹೀಟ್ ವೇವ್ (ಶಾಖದ ಹೊಡೆತ) ಆರೆಂಜ್ ಅಲರ್ಟ್ ನೀಡಿದೆ.
ಬಿಸಿಲಿನ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ವಿಶೇಷವಾಗಿ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಮನೆಯಿಂದ ಹೊರ ಹೋಗುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನಮ್ ಸಲಹೆ ನೀಡಿದ್ದಾರೆ.
‘ಬಿಸಿಲಿನಲ್ಲಿ ಹೋಗುವಾಗ ದೇಹಕ್ಕೆ ರಕ್ಷಣಾತ್ಮಕವಾಗಿ ಕನ್ನಡಕಗಳು, ಛತ್ರಿ-ಟೋಪಿ, ಬೂಟುಗಳು ಅಥವಾ ಚಪ್ಪಲ್ಗಳನ್ನು ಬಳಸಬೇಕು. ಪ್ರಯಾಣಿಕರು ತಮ್ಮೊಂದಿಗೆ ನೀರು ತೆಗೆದುಕೊಂಡು ಹೋಗಬೇಕು. ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು’ ಎಂದು ಕಿವಿಮಾತು ಹೇಳಿದ್ದಾರೆ.


