ಶಿಮ್ಲಾ : ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ವಿಶಿಷ್ಟ ವಿವಾಹ ಪದ್ಧತಿಯ ದಂಪತಿಗಳಿಗೆ ಈಗ ಮಗು ಜನಿಸಿದ್ದು, ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುಟುಂಬವು ಅಲ್ಲಿನ ಸಾಂಪ್ರದಾಯಿಕ “ಜೋಡಿದಾರ್” ಪದ್ಧತಿಯನ್ನು ಅನುಸರಿಸುತ್ತಿದ್ದು, ಈ ಪದ್ಧತಿಯಂತೆ ಒಬ್ಬ ಮಹಿಳೆ ಇಬ್ಬರು ಸಹೋದರರನ್ನು ವಿವಾಹವಾಗುತ್ತಾರೆ.
ಸುನಿತಾ ಚೌಹಾಣ ಎಂಬ ಮಹಿಳೆ ಪ್ರದೀಪ ನೇಗಿ ಮತ್ತು ಕಪಿಲ್ ನೇಗಿ ಎಂಬ ಸಹೋದರರನ್ನು ಈ ಸಂಪ್ರದಾಯದಂತೆ ವಿವಾಹವಾಗಿದ್ದರು. ಈಗ ಸುನಿತಾ ಮಗುವಿಗೆ ಜನ್ಮ ನೀಡಿದ್ದು, ಇಡೀ ಕುಟುಂಬದಲ್ಲಿ ಸಡಗರ ಮನೆಮಾಡಿದೆ.
ಇಬ್ಬರು ತಂದೆಯಂದಿರ ಪೈಕಿ ಒಬ್ಬರು ಮನೆಯಲ್ಲೇ ಇದ್ದು ಸಂಭ್ರಮಿಸುತ್ತಿದ್ದರೆ, ಮತ್ತೊಬ್ಬರು ಪ್ರಸ್ತುತ ವಿದೇಶದಲ್ಲಿದ್ದಾರೆ. ವಿದೇಶದಲ್ಲಿರುವ ತಂದೆಯು ಮಗುವಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತನ್ನ ಸಂತೋಷವನ್ನು ವ್ಯಕ್ತಪಡಿಸಿರುವುದು ಈಗ ವೈರಲ್ ಆಗಿದೆ.
“ಮಗುವಿನ ಆಗಮನವು ನಮ್ಮ ಜೀವನವನ್ನು ಪರಿಪೂರ್ಣಗೊಳಿಸಿದೆ. ನನ್ನ ಮಗುವನ್ನು ಎತ್ತಿಕೊಳ್ಳಲು ಮತ್ತು ಪಿತೃತ್ವದ ಸಂತೋಷವನ್ನು ಅನುಭವಿಸಲು ನಾನು ಶೀಘ್ರದಲ್ಲೇ ಮನೆಗೆ ಮರಳಲು ಕಾತರನಾಗಿದ್ದೇನೆ. ಮೊದಲೆಲ್ಲ ಮನೆಗೆ ಮರಳಲು ನನಗೆ ಅಷ್ಟೊಂದು ಆತುರವಿಲ್ಲದಿದ್ದರೂ, ಈಗ ನನ್ನ ಕುಟುಂಬದೊಂದಿಗೆ ಅಮೂಲ್ಯ ಸಮಯವನ್ನು ಕಳೆಯಲು ನಾನು ಕಾಯುತ್ತಿದ್ದೇನೆಎಂದು ಅವರು ಬರೆದಿದ್ದಾರೆ.
ಏನಿದು “ಜೋಡಿದಾರ್” ಪದ್ಧತಿ?
‘ಜೋಡಿದಾರ್’ ಎಂಬುದು ಹಿಮಾಚಲ ಪ್ರದೇಶದ ಸಿರ್ಮೌರ್ ಮತ್ತು ಕಿನ್ನೌರ್ನ ಕೆಲವು ಭಾಗಗಳಲ್ಲಿ ಕಂಡುಬರುವ ಒಂದು ಪ್ರಾಚೀನ ಪದ್ಧತಿಯಾಗಿದೆ. ಕೆಲವು ಭಾಗಗಳಲ್ಲಿ ಇಂದಿಗೂ “ಜೋಡಿದಾರ್” ಅಥವಾ ಬಹುಪತಿತ್ವದ (Polyandry) ಸಂಪ್ರದಾಯ ಈಗಲೂ ವಿರಳವಾಗಿ ಚಾಲ್ತಿಯಲ್ಲಿದೆ. ಈ ಪದ್ಧತಿಯಡಿ ಒಂದೇ ಕುಟುಂಬದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸಹೋದರರು ಒಬ್ಬಳೇ ಮಹಿಳೆಯನ್ನು ಮದುವೆಯಾಗಲು ಅವಕಾಶವಿರುತ್ತದೆ.
ಈ ರೀತಿಯ ಆಚರಣೆಗಳು ಈ ಹಿಂದೆ ಹೆಚ್ಚು ಸಾಮಾನ್ಯವಾಗಿದ್ದವು. ಈ ಹಿಂದೆ, ಪೂರ್ವಜರ ಆಸ್ತಿ ಮತ್ತು ಭೂಮಿ ವಿಭಜನೆಯಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಆಸ್ತಿಯು ಒಂದೇ ಮನೆಯಲ್ಲಿ ಉಳಿಯುವುದರಿಂದ ಕುಟುಂಬದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವಾಗುತ್ತಿತ್ತು.
ಈ ದಂಪತಿಗಳು ಆಧುನಿಕ ಹಿನ್ನೆಲೆಯನ್ನು ಹೊಂದಿದ್ದರೂ ಸಹ, ಹಳೆಯ ಸಂಪ್ರದಾಯವನ್ನು ಪಾಲಿಸಿದ್ದರಿಂದ ಕಳೆದ ವರ್ಷ ಇವರ ಮದುವೆ ದೇಶಾದ್ಯಂತ ಸುದ್ದಿಯಾಗಿತ್ತು.
ಪೋಷಕತ್ವ ಹೇಗೆ?
ಮಗುವಿನ ಜನನದ ನಂತರ, ಇಬ್ಬರು ತಂದೆಯರಿರುವ ಕುಟುಂಬದಲ್ಲಿ ಪೋಷಕತ್ವದ ಜವಾಬ್ದಾರಿ ಹೇಗಿರುತ್ತದೆ ಎಂಬ ಕುತೂಹಲ ಮೂಡಿದೆ. ಈ ಕುಟುಂಬದಲ್ಲಿ ದಂಪತಿಗಳು ಪೋಷಕತ್ವದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಮಗುವನ್ನು ಇಬ್ಬರೂ ಪೋಷಕರು ಸಮಾನವಾಗಿ ಬೆಳೆಸುತ್ತಾರೆ.
ಈ ಹಿಂದೆ ತಂದೆ ಯಾರು ಎಂಬ ವಿಷಯಕ್ಕೆ ಅಷ್ಟೊಂದು ಮಹತ್ವ ನೀಡುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕಿನ ವಿಷಯಗಳಿಗಾಗಿ ಪಿತೃತ್ವವನ್ನು ಸ್ಥಾಪಿಸಲು ಡಿಎನ್ಎ (DNA ಪರೀಕ್ಷೆ ನಡೆಸಲಾಗುತ್ತದೆ.
ವೈಜ್ಞಾನಿಕ ಪರೀಕ್ಷೆ ಏನೇ ಇದ್ದರೂ, ಸಾಂಸ್ಕೃತಿಕವಾಗಿ ಮಗುವನ್ನು ಅವಿಭಕ್ತ ಕುಟುಂಬದ ಸದಸ್ಯನಂತೆ ಕಾಣಲಾಗುತ್ತದೆ ಮತ್ತು ಮಗುವಿಗೆ ಇಬ್ಬರೂ ತಂದೆಯರಿಂದ ಸಮಾನ ಪ್ರೀತಿ ಹಾಗೂ ಜವಾಬ್ದಾರಿ ಸಿಗುತ್ತದೆ.


