ಪಟ್ನಾ: ಬಿಹಾರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಾಮ್ರಾಟ್ ಚೌಧರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬುಧವಾರ ಬೆಳಗ್ಗೆ ಲೋಕಭವನದಲ್ಲಿ ಸಾಮ್ರಾಟ್ ಚೌಧರಿ ಅವರಿಗೆ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸನೈನ್ ಅವರು ಪ್ರಮಾಣ ವಚನ ಬೋಧಿಸಿದರು.
ಚೌಧರಿ ಅವರ ಜೊತೆಗೆ ಕೆಲ ಸಚಿವರು ಕೂಡ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ರಾಜ್ಯಸಭೆಗೆ ಆಯ್ಕೆಯಾಗಿರುವ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಬಿಹಾರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಚೌಧರಿ ಅವರು ಆರ್ಜೆಡಿ ಸೇರುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಬಳಿಕ ಜೆಡಿಯು ಸೇರಿ ನಿತೀಶ್ ಕುಮಾರ್ ಅವರಿಗೆ ನಿಷ್ಠರಾದರು. ನಂತರ ಕೇಂದ್ರ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನ ಅವಾಮ್ ಮೋರ್ಚಾ(ಎಚ್ಎಎಂ) ಸೇರಿದರು.
2018ರಲ್ಲಿ ಬಿಜೆಪಿ ಸೇರಿದ ಅವರು, 2023ರಲ್ಲಿ ಬಿಹಾರ ಘಟಕದ ಅಧ್ಯಕ್ಷರಾದರು. 2024ರಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೇರಿದರು.
1999ರಲ್ಲಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಸಂಪುಟದಲ್ಲಿ ಸಾಮ್ರಾಟ್ ಸಚಿವರಾಗಿದ್ದರು. ಅರ್ಹ ವಯಸ್ಸು ಇಲ್ಲ ಎಂಬ ಆರೋಪ ಕೇಳಿ ಬಂದ ಕಾರಣ ಅವರನ್ನು ತೆಗೆದು ಹಾಕಲಾಗಿತ್ತು.
ಬಿಹಾರದ ಉಪಮುಖ್ಯಮಂತ್ರಿಗಳಾಗಿ ಜೆಡಿ (ಯು) ನಾಯಕರಾದ, ನಿತೀಶ್ ಕುಮಾರ್ ಆಪ್ತರು ಆದ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಪ್ರಸಾದ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು. ಡಿಸಿಎಂ ಆಗಿದ್ದ ಬಿಜೆಪಿ ನಾಯಕ ವಿಜಯ್ ಸಿನ್ಹಾ ಅವರಿಗೆ ಹುದ್ದೆ ಕೈತಪ್ಪಿದೆ.
2017 ರಲ್ಲಿ ಬಿಜೆಪಿ ಸೇರಿದ್ದ ಚೌಧರಿ ಅವರನ್ನು ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಬಿಹಾರದ ವಿಶಿಷ್ಟ ರಾಜಕೀಯ ಭೂದೃಶ್ಯದಲ್ಲಿ ಚೌಧರಿ ಅವರ ಪದೋನ್ನತಿ ಜಾತಿ ರಾಜಕಾರಣದ ಮಹತ್ವವನ್ನೂ ಹೊಂದಿದೆ. ಪ್ರಭಾವಿ ಕೊಯೇರಿ ಸಮುದಾಯದಿಂದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಎರಡನೇ ನಾಯಕ ಚೌಧರಿ ಅವರಾಗಿದ್ದಾರೆ. ಮೊದಲನೆಯವರು ಸತೀಶ್ ಪ್ರಸಾದ್ ಸಿಂಗ್, 1968 ರಲ್ಲಿ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡ ನಂತರ ಅವರ ಸಮ್ಮಿಶ್ರ ಸರ್ಕಾರ ಕುಸಿದ ಐದು ದಿನಗಳ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತ್ತು.
ಬಿಹಾರದಲ್ಲಿ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಎರಡೂ ಹುದ್ದೆಗಳನ್ನು ಅಲಂಕರಿಸಿದ ಕೆಲವೇ ಕೆಲವು ನಾಯಕರಲ್ಲಿ ಒಬ್ಬರಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಸಾಲಿಗೆ ಸಾಮ್ರಾಟ್ ಚೌಧರಿ ಕೂಡ ಸೇರಿದ್ದಾರೆ.
ಚೌಧರಿ ಅವರು ಡಿಸಿಎಂ ನಿಂದ ನೇರವಾಗಿ ಸಿಎಂ ಆದರೆ, 1967 ರಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ ಠಾಕೂರ್ 1970 ರಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ಕಾಯಬೇಕಾಗಿ ಬಂದಿತ್ತು.


