ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬಿಸಿಗಾಳಿಯೂ ತೀವ್ರವಾಗಿದೆ. ಈ ನಡುವೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಎಚ್ಚರಿಕೆ ನೀಡಿದೆ.
ಈ ಕುರಿತು ಭಾರತೀಯ ಹವಾಮಾನ ಕೇಂದ್ರ (ಐಎಂಡಿ) ನೀಡಿರುವ ಮಾಹಿತಿ ಆಧರಿಸಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ, ‘ಬಿಸಿ ಗಾಳಿಯ ಅಲೆಯ ನಡುವೆ ಏಪ್ರಿಲ್ 19ರವರೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ‘ ಎಂದು ತಿಳಿಸಿದೆ.
ಬಿಸಿಗಾಳಿ ಎಚ್ಚರಿಕೆ
ಮುಂದಿನ 7 ದಿನಗಳ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಮಾರ್ಚ್ 19 ರವರೆಗೆ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ಆರ್ದ್ರ ಪರಿಸ್ಥಿತಿಗಳು ಹೆಚ್ಚಾಗಿರುವ ಸಾಧ್ಯತೆಯಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.
ಯೆಲ್ಲೋ ಅಲರ್ಟ್
ಏಪ್ರಿಲ್ 15 ರಿಂದ 19ರವರೆಗೆ ಬಿಸಿ ಗಾಳಿ ಹೆಚ್ಚಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


