ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿ ಮದುವೆ ಸಿದ್ಧತೆಯಲ್ಲಿದ್ದ ವೈದ್ಯರನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಗಾರದ ಸಮೇತ ಬಂಧಿಸಿದ್ದಾರೆ.
ಡಾ. ರಮೇಶ್ ಕಲಗುಟಕರ (51) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮಂಜುನಾಥ ಪಿ.ಎಲ್. (70) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ₹50 ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ಬಳಸಿದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.
ಈತ ವೈದ್ಯನಿಗೆ ಪರಿಚಯಸ್ಥ ಎನ್ನಲಾಗಿದೆ. ಬಂಗಾರದ ಆಸೆಗೆ ಬಿದ್ದ ಈತ ಸೋಮವಾರ (ಏಪ್ರಿಲ್ 20) ಮದುವೆಯಾಗಬೇಕಿದ್ದ ವೈದ್ಯ ಡಾ.ರಮೇಶ ಅವರನ್ನುಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ವೈದ್ಯರ ಮನೆಯಲ್ಲಿ ತಂಗಿದ್ದ ಮಂಜುನಾಥಗೆ ಡಾ. ರಮೇಶ, ತಾನು ಮದುವೆಗಾಗಿ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳನ್ನು ತೋರಿಸಿದ್ದಾರೆ. ಇದೇ ಅವರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.
ಇಬ್ಬರು ಮಲಗಿದ ನಂತರ ಮಂಜುನಾಥ ವೈದ್ಯರ ತಲೆಗೆ ಕಬ್ಬಿಣದ ರಾಡಿನಿಂದ ಬಲವಾಗಿ ಹೊಡೆದಿದ್ದು, ವೈದ್ಯರು ಸಾವಿಗೀಡಾಗಿದ್ದಾರೆ. ಬಳಿಕ ಮಂಜುನಾಥ ಒಡವೆ ಹಾಗೂ ಹಣ ತೆಗೆದುಕೊಂಡು ಹೊರಗಿನಿಂದ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆ ನಡೆದು 24 ಗಂಟೆಯೊಳಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


