ಭುವನೇಶ್ವರ : ಇಲ್ಲಿನ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 ಗ್ರ್ಯಾಂಡ್ ಫಿನಾಲೆಯಲ್ಲಿ ಸಾಧ್ವಿ ಸತೀಶ್ ಸೈಲ್ ವಿಜೇತರಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾದ ಸತೀಶ ಸೈಲ್ ಅವರ ಪುತ್ರಿ. ಮಹಾರಾಷ್ಟ್ರದ ರಾಜನಂದಿನಿ ಪವಾರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಶ್ರೀ ಅದ್ವೈತ ಜಿ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಆಫ್ ಆಗಿದ್ದಾರೆ.
ಕೆಐಐಟಿಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು. ಸಾಧ್ವಿ ಅವರು ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದಿನ ವಿಜೇತರಾದ ನಿಖಿತಾ ಪೋರ್ವಾಲ್, ರೇಖಾ ಪಾಂಡೆ ಹಾಗೂ ಆಯುಷಿ ಧೋಕಲಾ ನೂತನ ವಿಜೇತೆಗೆ ಕಿರೀಟ ಧಾರಣೆ ಮಾಡಿ ಶುಭ ಹಾರೈಸಿದರು.
61ನೇ ಆವೃತ್ತಿಯ ಪ್ರತಿಷ್ಠಿತ ಸ್ಪರ್ಧೆಗೆ ಇದೇ ಮೊದಲ ಬಾರಿಗೆ ಕೆಐಐಟಿ ಕ್ಯಾಂಪಸ್ ಸಾಕ್ಷಿಯಾಯಿತು. ದೇಶದ 30 ರಾಜ್ಯಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೊದಲ ಹಂತದಲ್ಲಿ 15 ಸ್ಪರ್ಧಿಗಳು ಹೊರಬಂದರು. ಮುಂದಿನ ಹಂತಕ್ಕೆ ಆಯ್ಕೆಯಾದ 15 ಸ್ಪರ್ಧಿಗಳಲ್ಲಿ ಕರ್ನಾಟಕದ ಖುಷಿ ರಮೇಶ ಕಲಕೇರಿ ಅವರೂ ಸೇರಿದ್ದರು. ಎರಡನೇ ಹಂತದಲ್ಲಿ 8 ಸ್ಪರ್ಧಿಗಳು ಆಯ್ಕೆ ಮಾಡಲಾಯಿತು. ಮೂರನೇ ಹಂತದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಅಂತಿಮವಾಗಿ ಮೂವರನ್ನು ಆಯ್ಕೆ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ ಸೈಲ್ ಪುತ್ರಿಯಾಗಿರುವ ಸಾಧ್ವಿ ಮಿಸ್ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಪ್ರಶ್ನೋತ್ತರ ಸುತ್ತಿನಲ್ಲಿ ಧೈರ್ಯ, ಬುದ್ಧಿವಂತಿಕೆಯಿಂದ ಉತ್ತರ ನೀಡಿದ ಸಾಧ್ವಿ ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಮುಡಿಗೇರಿಸಿಕೊಂಡರು.


