ಮೂರು ದಶಕಗಳ ಕಾಲ ರಮೇಶ ಕತ್ತಿ ಅವರು ಬೆಳಗಾವಿಯ ಡಿಸಿಸಿ ಬ್ಯಾಂಕ್ ಸಾರಥ್ಯ ವಹಿಸಿಕೊಂಡು ಬ್ಯಾಂಕ್ ಅನ್ನು ಸುಭದ್ರವಾಗಿ ಮುನ್ನಡೆಸುವ ಕಾಲದಲ್ಲಿ ಬ್ಯಾಂಕ್ ಯಾವುದೇ ವಿವಾದದ ಸುಳಿಗಾಳಿಗೆ ಸಿಲುಕಿರಲಿಲ್ಲ. ಆದರೆ ರಮೇಶ ಕತ್ತಿ ಅವರ ಹಿಡಿತದಿಂದ ಕೈಜಾರಿದ ಮೇಲೆ ಬೆಳಗಾವಿಯ ಈ ಪ್ರತಿಷ್ಠಿತ ಬ್ಯಾಂಕ್ ಇದೀಗ ವಿವಾದಕ್ಕೆ ಸಿಲುಕಿಕೊಂಡಿದೆ. ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರ ನಂಬಿಕೆಯ ಬ್ಯಾಂಕಾಗಿ ವಿಶ್ವಾಸ ಗಳಿಸಿದ್ದ ಈ ಬ್ಯಾಂಕಿ ಇತ್ತೀಚಿನ ದಿನಗಳಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ದಿನೇ ದಿನೇ ಬ್ಯಾಂಕಿನ ಬಗ್ಗೆ ಗ್ರಾಹಕರಲ್ಲಿ ಭದ್ರತೆಯ ಭಾವ ಮೂಡುತ್ತಿರುವುದು ಸುಳ್ಳಲ್ಲ. ಜನಮಾನಸದಿಂದ ದೂರವಾಗುತ್ತಿರುವ ಬೇಸರವನ್ನು ಅನೇಕ ಗ್ರಾಹಕರು ವ್ಯಕ್ತಪಡಿಸಿರುವುದು ಮಾತ್ರ ಕಳವಳಕಾರಿ.
ಬೆಳಗಾವಿ : ಕಳೆದ ಕೆಲವು ತಿಂಗಳುಗಳಿಂದ ತನ್ನ ವಿವಾದಾತ್ಮಕ ನಿಲುವುಗಳಿಂದ ಸದಾ ಸುದ್ದಿಯಲ್ಲಿ ಇರುವ, ಒಂದು ಕಾಲದಲ್ಲಿ ಇಡೀ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಬ್ಯಾಂಕು ಎನಿಸಿಕೊಂಡಿದ್ದ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಇದೀಗ ಆರ್ಬಿಐ ಬಹುದೊಡ್ಡ ಮೊತ್ತದ ದಂಡ ವಿಧಿಸಿದೆ.
ಹೀಗಾಗಿ ಇದು ಈಗ ಮತ್ತೆ ಸುದ್ದಿಯಲ್ಲಿದೆ. ಬ್ಯಾಂಕಿಂಗ್ ನಿಯಮಾವಳಿ ಉಲ್ಲಂಘಿಸಿದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ )ಇದಕ್ಕೆ ಫೆಬ್ರವರಿ 23ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2 ಲಕ್ಷ ರೂಪಾಯಿ ದಂಡ ವಿಧಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕರಿಗೆ ಸಂಬಂಧಿತ ವ್ಯಕ್ತಿಗಳಿಗೆ ಸಾಲ ಮಂಜೂರು, ನಿಗದಿತ ಮಿತಿಯನ್ನು ಮೀರಿ ಬುಲೆಟ್ ರಿಪೇಮೆಂಟ್ ಯೋಜನೆಯಡಿ ಚಿನ್ನದ ಅಡಮಾನ ಸಾಲ, ವಸತಿಯೇತರ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗೆ ಸಾಲ ಮಂಜೂರಾತಿ ಸೇರಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 20 ಮತ್ತು ಸೆಕ್ಷನ್ 56ರ ನಿಯಮಗಳ ಉಲ್ಲಂಘನೆ ಮತ್ತು ಗೋಲ್ಡ್ ಲೋನ್ ಬುಲೆಟ್ ರಿಪೇಮೆಂಟ್ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಗೆ ಎಸ್ಪೋಸರ್ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ನಿರ್ದೇಶನಗಳನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಪಾಲನೆ ಮಾಡಿಲ್ಲ…!
ಇದರಂತೆ ಇದೀಗ ಆರ್ ಬಿಐ ಕಠಿಣ ಕ್ರಮಕ್ಕೆ ಮುಂದಾಗಿದೆ 2025ರ ಮಾರ್ಚ್ 31ರ ಹಣಕಾಸು ಸ್ಥಿತಿ ಆದರಿಸಿ ನಬಾರ್ಡ್ ನಡೆಸಿದ ನಿಯಮಿತ ಪರಿಶೀಲನೆಯಲ್ಲಿ ಹಲವು ಲೋಪ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಬ್ಯಾಂಕಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಬ್ಯಾಂಕಿನ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ನಂತರ ಆರೋಪ ಸ್ಥಿರ ಎಂದು ಆಗಿರುವುದಾಗಿ ಆರ್ಬಿಐ ತಿಳಿಸಿದೆ.


