ಧಾರವಾಡ :
ಧಾರವಾಡ ಮಾಳಾಪುರದ ಶಕೀಲ್, ಶೌಕತಅಲಿ ಮುಲ್ಲಾ ಮತ್ತು ಮಹ್ಮದ್ ಮಾವಜಾನ್ಎಂಬುವವರು ದಿ:29/12/2021ರಂದು ಎದುರುದಾರರಾದ ಸ್ಪೈಸ್ಜೆಟ್ ಲಿಮಿಟೆಡ್ ಮೂಲಕ ಹೈದರಾಬಾದನಿಂದ ಬೆಳಗಾವಿಗೆ ಮರಳಿ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಸದರಿ ವಿಮಾನ ನಿಗದಿತ ದಿನಾಂಕದಂದು ಮಧ್ಯಾಹ್ನ 1-30 ಗಂಟೆಗೆ ಹೊರಡುವದಿತ್ತು. ದೂರುದಾರರು ವಿಮಾನ ಹೊರಡುವ 1 ತಾಸು 15 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದರೂ ಅಲ್ಲಿನ ಕರ್ತವ್ಯ ನಿರತ ಸೆಕ್ಯುರಿಟಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಲು ನಿರಾಕರಿಸಿದ್ದರು. ಸದರಿ ದೂರುದಾರರು ಎಷ್ಟೇ ವಿನಂತಿಸಿದರೂ ಸದರಿ ವಿಮಾನ ನಿಲ್ದಾಣದ ಸಿಬ್ಬಂದಿ ಫಿರ್ಯಾದಿದಾರರ ವಿನಂತಿಯನ್ನು ನಿರ್ಲಕ್ಷಿಸಿರುತ್ತಾರೆ. ಕಾರಣ ಸದರಿ ಸ್ಪೈಸ್ಜೆಟ್ ನವರು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ದೂರುದಾರರು ವಿಮಾನ ಹೊರಡುವ 75 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದರೂ, ಅಲ್ಲಿನ ಕರ್ತವ್ಯ ನಿರತ ಸಿಬ್ಬಂದಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಎದುರುದಾರರು ಫಿರ್ಯಾದಿದಾರರಿಗೆ ಅವರು ಸಂದಾಯ ಮಾಡಿದ ಏರ್ಟಿಕೆಟ್ ಪೂರ್ತಿ ಶುಲ್ಕ ರೂ.8,457/- ಮತ್ತು ಅವರು ಅನುಭವಿಸಿದ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಾನಿಗಾಗಿ ರೂ.50,000/-ಗಳ ಪರಿಹಾರ ಜೊತೆಗೆ ಪ್ರಕರಣದ ಖರ್ಚು ರೂ.5,000/-ಗಳನ್ನು ಈ ಆದೇಶದ ದಿನಾಂಕದಿಂದ 30 ದಿನಗಳ ಒಳಗಾಗಿ ಕೊಡಲು ಆಯೋಗ ಆದೇಶಿಸಿದೆ.