ಬೆಳಗಾವಿ: ಇದು ನನ್ನ ಕೊನೆಯ ಚುನಾವಣೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಮುಂದಿನ ಚುನಾವಣೆಗೆ ಸಿದ್ದನಾಗುತ್ತಿದ್ದೇನೆ. ಕಳೆದ ಸಲ ಹನ್ನೆರಡು ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದು ಮುಂದಿನ ಬಾರಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ನನ್ನ ಆರೋಗ್ಯ ಹದಗೆಟ್ಟರೆ ಮಾತ್ರ ನನ್ನ ತಮ್ಮನ ಮಗನಿಗೆ ರಾಜಕೀಯ ಅವಕಾಶ ಕೊಡುತ್ತೇನೆ ಎಂದು ರಾಮದುರ್ಗ ಶಾಸಕ ಅಶೋಕ ಪಟ್ಟಣ ಹೇಳಿದರು.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಉಸಿರು ಇರುವ ತನಕ ರಾಜಕಾರಣ ಮಾಡುತ್ತೇನೆ. ನನಗೆ ಸಚಿವ ಸ್ಥಾನಕ್ಕಿಂತ ಸ್ವಾಭಿಮಾನ ಮುಖ್ಯ. ಸಚಿವ ಸ್ಥಾನಕ್ಕಾಗಿ ಚಿಕ್ಕ ಮಕ್ಕಳಂತೆ ಪದೇಪದೇ ಮುಖ್ಯಮಂತ್ರಿಗಳ ಹಿಂದೆ ಬಿದ್ದು ಕೇಳುವುದಿಲ್ಲ. ಅದಕ್ಕೆ ಅನುಗುಣವಾಗಿ ಮಂತ್ರಿಮಂಡಲ ರಚನೆ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರ ಸಂಬಂಧ ಚೆನ್ನಾಗಿದೆ. ಆದರೆ ಮಾಧ್ಯಮಗಳೇ ಅವರ ಮಧ್ಯೆ ಜಗಳ ತರುತ್ತಿವೆ. ದೊಡ್ಡ ಜಿಲ್ಲೆ ಆಗಿರುವುದರಿಂದ ಬೆಳಗಾವಿಗೆ ಕನಿಷ್ಠ ಮೂರು ಸಚಿವ ಸ್ಥಾನವನ್ನಾದರೂ ನೀಡಬೇಕು ಎಂದು ಅವರು ಒತ್ತಾಯಿಸಿದರು.