ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸುವ ಸಂಬಂಧ ರಾಜ್ಯ ಸರಕಾರಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯಕ್ಕೆ ಜುಲೈ 6 ರಂದು ಅಭಿಪ್ರಾಯ ವರದಿ ಸಲ್ಲಿಸಿದ ನಂತರ ಪೌರಾಡಳಿತ ನಿರ್ದೇಶಕರು ತಮ್ಮ ಅಭಿಪ್ರಾಯ ವರದಿಯನ್ನು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಕಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬೆಳಗಾವಿಯಲ್ಲಿ ಗುರುವಾರ ಕರೆದಿದ್ದ ಪತ್ರಿಕಾ ಪರಿಷತ್ತಿನಲ್ಲಿ ಪಾಲಿಕೆಯ ವಿಷಯ ಪ್ರಸ್ತಾಪಿಸಿ, ಬೆಳಗಾವಿ ಜಿಲ್ಲಾಧಿಕಾರಿಗಳು ಈಗಾಗಲೇ ಸರಕಾರಕ್ಕೆ ವರದಿ ಕಳಿಸಿದ್ದಾರೆಂದು
ಹೇಳಿರುವುದು ಗಮನಾರ್ಹವಾಗಿದೆ.
ನಗರಾಭಿವೃದ್ಧಿ ಕಾರ್ಯದರ್ಶಿ ಕಾವೇರಿ ಅವರು ಸಹ ಗುರುವಾರ ಬೆಳಗಾವಿಗೆ ಆಗಮಿಸಿ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ ಸಂಜೆ ಬೆಂಗಳೂರಿಗೆ
ಮರಳಿದ್ದಾರೆ.
ನಗರಾಭಿವೃದ್ಧಿ ಕಾರ್ಯದರ್ಶಿಗಳು ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಅಭಿಪ್ರಾಯ ವರದಿಗಳನ್ನು ಪರಿಶೀಲಿಸಿ ಬೆಳಗಾವಿ ಪಾಲಿಕೆಯ ಆಯುಕ್ತರಿಗೆ ಸರಕಾರದ ಸ್ಪಷ್ಟ ಅಭಿಪ್ರಾಯವನ್ನು
ಕಲಿಸಲಿದ್ದಾರೆ.
ರಾಜ್ಯ ವಿಧಾನ ಮಂಡಲದಲ್ಲಿ ಗಡಿವಿವಾದ ಸಂಬಂಧ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಗಳನ್ನು ಸ್ವೀಕರಿಸಲಾಗಿದೆಯೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇದೇ ಅಂಶಗಳನ್ನು ತಮ್ಮ ಸ್ಪಷ್ಟೀಕರಣದಲ್ಲಿ ಉಲ್ಲೇಖಿಸುವ ಸಾಧ್ಯತೆಯಿದೆ.
ಬೆಳಗಾವಿಯ ಸಮಾನ ಮನಸ್ಕ 25 ಕ್ಕೂ ಅಧಿಕ ಕನ್ನಡ ಸಂಘಟನೆಗಳು ರಾಜ್ಯ ಸರಕಾರದ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿದ್ದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಎರಡು ಸುತ್ತಿನ ಸಭೆಗಳನ್ನು ನಡೆಸಿವೆ. ಸರಕಾರದ ಪ್ರತಿಕ್ರಿಯೆ ನೋಡಿಕೊಂಡು ಬೆಂಗಳೂರಿಗೆ ನಿಯೋಗ ಒಯ್ಯಲು ತೀರ್ಮಾನಿಸಿವೆ. ಪಾಲಿಕೆಯ ಗೊತ್ತುವಳಿ ಸಂಬಂಧ ತಾವು ರಾಜ್ಯ ಸರಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಸಚಿವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಾಗೂ ಕನ್ನಡ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದ್ದಾರೆ.