ಬಾಗಲಕೋಟೆ: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಪ್ರಮಾಣ ಹೆಚ್ಚಿಗೆ ಇದ್ದು, ರಪ್ತು ಪ್ರಮಾಣ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಶೀಥಿಲೀಕರಣ ಘಟಕ ಸ್ಥಾಪನೆಗೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ ಮೊಹಸಿನ್ ಸೂಚಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಜಿ.ಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ಮತ್ತು ಅರಿಶಿಣ ಬೆಳೆ ಸಂಗ್ರಹಣೆಗೆ ಶೀಥಲೀಕರಣ ಘಟಕ ಅವಶ್ಯವಿದ್ದು, ತೋಟಗಾಕೆ ಇಲಾಖೆಯು ಸಹಾಯಧನ ನೀಡುವ ಮೂಲಕ ಘಟಕ ಸ್ಥಾಪನೆಗೆ ಕ್ರಮವಹಿಸಲು ತಿಳಿಸಿದ ಅವರು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಉತ್ಪನ್ನ ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಸಲ್ಲದು. ಸಮಸ್ಯೆ ಹತೋಟಿ ಮೀರುವ ಮೊದಲೇ ಸಮಸ್ಯೆ ಬಗೆಹರಿಸುವ ಕೆಲಸವಾಗಬೇಕು. ಗ್ರಾಮ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಜವಾಬ್ದಾರಿ ಹೆಚ್ಚಿಗೆ ಇದೆ. ಕುಡಿಯುವ ನೀರಿಗೆ ಸಂಬಂಧಿಸಿ ಹೆಸ್ಕಾಂದವರು ವಿದ್ಯುತ್ ಕಡಿತಗೊಳಿಸದಂತೆ ಸೂಚಿಸಿದರು. ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಚಾಲ್ತಿಯಲ್ಲಿರಬೇಕು ಎಂದರು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಪ್ರಥಮ ಆದ್ಯತೆ ನೀಡಿ, ನಂತರ ಖಾಸಗಿ ಕೊಳವೆಭಾವಿಯಿಂದ ಬಾಡಿಗೆ ಪಡೆದು ನೀರು ಒದಗಿಸಲು ಕ್ರಮವಹಿಸಬೇಕು. ಅನಿವಾರ್ಯ ಪರಿಸ್ಥಿತಿ ಇದ್ದಾಗ ಮಾತ್ರ ಹೊಸ ಕೊಳವೆಬಾವಿ ಕೊರೆಯಿಸಲು ತಿಳಿಸಿದರು. ಗೋಶಾಲೆಗಳಿಗೆ ಮೇವು ಕೊಡಲು ಸೂಚಿಸಿದರು. ಹೊಸದಾಗಿ ಗೋಶಾಲೆ ನಿರ್ಮಿಸಲು ಮುಂದೆ ಬಂದಲ್ಲಿ ಅನುಕೂಲ ಮಾಡಿಕೊಡಲು ತಿಳಿಸಿದರು.
ಬರುವ ಮುಂಗಾರು ಹಂಗಾಮಿಗೆ ವಾಡಿಕೆಯಂತೆ ಮಳೆಯಾಗುವ ಸಾದ್ಯತೆ ಇದೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಬಾಕಿ ಇರುವ ಎಲ್ಲ ಬಿಲ್ಲುಗಳನ್ನು ೨-೩ ದಿನಗಳಲ್ಲಿ ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಲು ತಿಳಿಸಿದರು. ವಿವಿಧ ಇಲಾಖೆಯ ಪ್ರಗತಿಯ ಮಾಹಿತಿಯನ್ನು ಪಡೆದ ಅವರು ಪ್ರಗತಿ ಕಡಿಮೆ ಇರುವ ಇಲಾಖೆಯ ಅಧಿಕಾರಿಗಳು ಮಾರ್ಚ ಅಂತ್ಯಕ್ಕೆ ಶೇ.೧೦೦ ರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ವಿಶೇಷ ಜಿಲ್ಲಾಧಿಕಾರಿ ದುರಗೇಶ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.