ಬೆಳಗಾವಿ :
27 ನವೆಂಬರ್ 2026 ರಂದು ನಡೆದ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸಭೆಯಲ್ಲಿ, ಸಂಸ್ಥೆಯ ಉಪಕಾರ್ಯಾಧ್ಯಕ್ಷರ ಹುದ್ದೆಗೆ ಚುನಾವಣೆ ಪ್ರಕ್ರಿಯೆ ಜರುಗಿಸಲಾಯಿತು. ಈ ಚುನಾವಣೆಯಲ್ಲಿ ಜಯಾನಂದ ಊರ್ಫ ರಾಜು ಮಹಾದೇವಪ್ಪ ಮುನವಳ್ಳಿ ಅವರು ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಉಪಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಗಳು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಸುನೀಲ ಎಸ್. ಜಲಾಲಪುರೆ ಅವರು ಚುನಾವಣಾ ಪ್ರಕ್ರಿಯೆಯನ್ನು ಜರುಗಿಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 1981 ರಿಂದ 1984ರ ವರೆಗೆ ಅನುಪಮ ಸೇವೆಗೈದ ಗೋಕಾಕ ನಗರದ ಪ್ರಸಿದ್ಧ ವರ್ತಕರಾಗಿದ್ದ ದಿವಂಗತ ಮಹಾದೇವಪ್ಪ ಮುನವಳ್ಳಿಯವರ ಸುಪುತ್ರ ಜಯಾನಂದ ಮುನವಳ್ಳಿ ಅವರು ತಂದೆಯ ಹಾದಿಯಲ್ಲಿಯೇ ಸಾಗಿದ್ದಾರೆ.
ಜಯಾನಂದ ಮುನವಳ್ಳಿ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗೋಕಾಕದಲ್ಲಿರುವ ಕೆಎಲ್‌ಇ ಐಸಿಯು ಮತ್ತು ಆಸ್ಪತ್ರೆ, ಆಂಗ್ಲ ಮಾಧ್ಯಮ ಶಾಲೆ, ಸಿ.ಎಸ್. ಅಂಗಡಿ ಪ್ರೌಢಶಾಲೆ ಹಾಗೂ ಪದವಿಪೂರ್ವ, ಪದವಿ ಕಾಲೇಜುಗಳ ಸ್ಥಾಪನೆಯಲ್ಲಿ ಹಾಗೂ ಅಲ್ಲಿನ ಕಟ್ಟಡಗಳಿಗೆ ಆಧುನಿಕ ಸ್ಪರ್ಶ ನೀಡಿ ಶೈಕ್ಷಣಿಕ ಸುಧಾರಣೆಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಪ್ರಭಾಕರ ಕೋರೆ, ಕಾಹೇರ್ ಕುಲಾಧಿಪತಿ ಡಾ.ಪ್ರಭಾಕರ ಕೋರೆ, ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ , ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಸಿ. ಕೊಳ್ಳಿ, ಯಲ್ಲನಗೌಡ ಎಸ್. ಪಾಟೀಲ, ಮಹಾಂತೇಶ ಎಂ. ಕವಟಗಿಮಠ, ಅನಿಲ ವಿ. ಪಟ್ಟೇದ, ಬಸವರಾಜ ಆರ್. ಪಾಟೀಲ, ಡಾ.ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಡಾ.ಪ್ರೀತಿ ದೊಡವಾಡ, ವಿಜಯ ಎಸ್. ಮೆಟಗುಡ, ಮಂಜುನಾಥ ಎಸ್. ಮುನವಳ್ಳಿ ಉಪಸ್ಥಿತರಿದ್ದರು.