ಬೆಳಗಾವಿ : ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಸರಕಾರ ಪ್ರತಿ ವರ್ಷ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ನಡೆಸುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕಿಂತ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ದುಪ್ಪಟ್ಟು ಹಣ ಖರ್ಚಾಗುತ್ತಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈವರೆಗೆ ನಡೆದ 14 ವಿಧಾನಮಂಡಲ ಅಧಿವೇಶನಗಳಿಗೆ ಸುಮಾರು ₹199 ಕೋಟಿಗೂ ಹೆಚ್ಚು ಖರ್ಚಾಗಿದೆ. ಪ್ರಥಮ ಬಾರಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿತ್ತು. ಇದೀಗ ಮತ್ತೆ ಡಿಸೆಂಬರ್ 2, 2026ರಿಂದ ನಡೆಯಲಿರುವ 15ನೇ ಚಳಿಗಾಲದ ಅಧಿವೇಶನಕ್ಕೆ ₹38.55 ಕೋಟಿ ವೆಚ್ಚವಾಗುವ ಅಂದಾಜು ಇದೆ.
ಈ ವರ್ಷ ನಡೆಯಲಿರುವುದು 15ನೇ ಅಧಿವೇಶನ. ಈ
15ನೇ ಅಧಿವೇಶನದ ಅಂದಾಜು ವೆಚ್ಚ (₹38.55 ಕೋಟಿ): ಡಿಸೆಂಬರ್ 2ರಿಂದ 11ರವರೆಗೆ (9 ಕಾರ್ಯನಿರ್ವಹಣಾ ದಿನಗಳು) ನಡೆಯಲಿರುವ ಅಧಿವೇಶನಕ್ಕೆ ಜಿಲ್ಲಾಧಿಕಾರಿ ಕಚೇರಿ ಮೂಲಕ ₹18.65 ಕೋಟಿ, ಪೊಲೀಸ್ ಇಲಾಖೆ ಮೂಲಕ ₹11.43 ಕೋಟಿ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ₹8.47 ಕೋಟಿ ಖರ್ಚು ಅಂದಾಜು ಮಾಡಲಾಗಿದೆ.
ಕಳೆದ ವರ್ಷದ (2025ರ) ಅಧಿವೇಶನಕ್ಕೆ ₹21 ಕೋಟಿಗೂ ಹೆಚ್ಚು ವೆಚ್ಚವಾಗಿತ್ತು. 2024ರ ಚಳಿಗಾಲದ ಅಧಿವೇಶನಕ್ಕೆ ₹27.78 ಕೋಟಿ ಖರ್ಚಾಗಿತ್ತು ಎಂದು ಆರ್ಟಿಐ ಮಾಹಿತಿ ಇದೆ.
ವರ್ಷದಿಂದ ವರ್ಷಕ್ಕೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ದುಬಾರಿ ಹಣ ಆಗುತ್ತಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಇಲ್ಲಿ ಅಧಿವೇಶನ ಆಯೋಜಿತವಾಗುತ್ತಿದ್ದು ವರ್ಷ ವರ್ಷವೂ ಖರ್ಚು ವೆಚ್ಚ ಹೆಚ್ಚಾಗುತ್ತಿರುವುದು ಸುದ್ದಿಗೆ ಗ್ರಾಸವಾಗಿದೆ. ಸಹಜವಾಗಿ ಪ್ರತಿ ವರ್ಷ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಹಣಕಾಸು ವೆಚ್ಚ ಅಧಿಕವಾಗುತ್ತಿದೆ. ಹಣದುಬ್ಬರ, ಇಂಧನ, ಆಹಾರ ದರಗಳ ಏರಿಕೆ, ಭದ್ರತೆ, ವಸತಿ, ಸಾರಿಗೆ ಹಾಗೂ ವ್ಯಾಪಕ ಸಿದ್ಧತೆಗಳಿಂದ ಪ್ರತಿ ವರ್ಷ ವೆಚ್ಚ ಹೆಚ್ಚುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದ
ಕಾಲಕ್ಕೆ ಇಡೀ ರಾಜ್ಯ ಸರಕಾರವೇ ಇಲ್ಲಿ ಇರುತ್ತದೆ. ಹೀಗಾಗಿ ಶಕ್ತಿ ಕೇಂದ್ರವೇ ಬೀಡು ಬಿಟ್ಟಿರುವುದರಿಂದ ಖರ್ಚು ವೆಚ್ಚ ಸಹಜವಾಗಿ ಹೆಚ್ಚಾಗುತ್ತಿದೆ.