Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಣೇಶ ಎಂದರೆ ಎಲ್ಲರಿಗೂ ಪ್ರೀತಿ ಗರಿಕೆಯ ಹುಲ್ಲಿನಿಂದಲೂ ಪೂಜಿಸಬಹುದು..ಎಕ್ಕದ ಹೂವನ್ನು ಅಕ್ಕರೆಯಿಂದ ಸ್ವೀಕರಿಸುವ ದೇವರು

ಎಸ್.ಸೂರ್ಯಪ್ರಕಾಶ ಪಂಡಿತ್

ಜೀವನದಲ್ಲಿ ಏನು ಮಾಡಲು ತೊಡಗಿದರೂ ಒಂದಲ್ಲ ಒಂದು ಅಡಚಣೆ ಎದುರಾಗುವುದು ಸಹಜ. ಹೀಗೆ ಎದುರಾಗುವ ವಿಘ್ನಗಳನ್ನು ಪರಿಹರಿಸಬಲ್ಲ ಶಕ್ತಿಯೊಂದು ನಮ್ಮ ಜೊತೆಗೆ ಇರಬಾರದಿತ್ತೆ – ಎಂದು ನಮಗೆ ಆ ಸಮಯದಲ್ಲಿ ಅನಿಸುವುದು ಸುಳ್ಳಲ್ಲ. ನಮ್ಮ ವಿಘ್ನಗಳ ಪರಂಪರೆಯನ್ನು ನಾಶಮಾಡಬಲ್ಲ ದೇವರೇ ಗಣೇಶ. ಅವನಿಗೆ ಒಂದು ಹೆಸರಿಲ್ಲ, ಸಾವಿರಾರು ಹೆಸರುಗಳು. ಅವನು ವಿಘ್ನನಾಯಕನೂ ಹೌದು, ವಿಘ್ನನಿವಾರಕನೂ ಹೌದು. ನಾವು ತಮಸ್ಸಿನಲ್ಲಿದ್ದಾಗ ಅವನು ನಮಗೆ ವಿಘ್ನನಾಯಕನೇ; ಆದರೆ ನಮ್ಮ ಸಾತ್ತ್ವಿಕತೆಯೇ ಅವನನ್ನು ನಮಗೆ ಸುಮುಖವಾಗಿಸುತ್ತದೆ, ವಿಘ್ನನಿವಾರಕನಾಗಿ ಒದಗಿಸುತ್ತದೆ. ಗಣಪತಿ, ವಿನಾಯಕ, ಲಂಬೋಧರ, ಪಾರ್ವತೀತನಯ, ಗಜಾನನ, ಈಶಪುತ್ರ, ಗೌರೀಸುತ, ಏಕದಂತ – ಹೀಗೆ ಅವನಿಗೆ ಹೆಸರುಗಳೂ ಹಲವು, ತತ್ತ್ವಗಳೂ ಹಲವು. ಅವನ ಹುಟ್ಟು, ಆಕಾರ, ಆಹಾರ, ಶಕ್ತಿ, ವಾಹನ, ವಿಹಾರ – ಪ್ರತಿಯೊಂದು ಕೂಡ ನಮ್ಮ ಜೀವನದ ಆಶಯ–ಆದರ್ಶಗಳೊಂದಿಗೆ ತಾದಾತ್ಮ್ಯವನ್ನು ಸಾಧಿಸಿರುವುದು ವಿಶೇಷ.

ಅವನು ಹುಟ್ಟು ಕಾಮಾತೀತ ತತ್ತ್ವದ ಆದರ್ಶ; ಅವನ ಆಕಾರ, ಅದು ವಿಶ್ವತೋಮುಖವೂ ವಿಶ್ವಾತ್ಮಕವೂ ಆದದ್ದು; ಅವನ ಇಷ್ಟದ ಮೋದಕ, ಅದು ನಾವು ಬಯಸುವ ಆನಂದದ ಬೋಧಕ; ಅವನ ಶಕ್ತಿ, ಅದು ಇಡಿಯ ಸೃಷ್ಟಿಯನ್ನೇ ಪೊರೆಯಬಲ್ಲ ಮಹಾಶಕ್ತಿ; ಅವನ ವಾಹನ, ಅದು ಅವನ ಔದಾರ್ಯದ ಕಾರಣ, ಅದರಿಂದ ಆಗುವುದು ನಮ್ಮ ಅಹಂಕಾರದ ದಮನ; ಅವನ ವಿಹಾರ, ಅದು ಸದಾ ಪ್ರಣವದಲ್ಲಿಯ ಸಂಚಾರ, ಸಿದ್ಧಿ–ಬುದ್ಧಿಗಳ ಸಾಮರಸ್ಯದ ವಿಚಾರ.

ಗಣಪತಿಯ ಒಂದೊಂದು ನಾಮದಲ್ಲಿಯೂ ಅಡಗಿರುವ ತತ್ತ್ವವನ್ನು ಸವಿಸ್ತಾರವಾಗಿ ವಿವರಿಸಲಾದೀತು. ಗಣಪತಿಯ ಕಲ್ಪನೆಯನ್ನು ವೇದಕಾಲದಿಂದಲೂ ನೋಡಬಹುದು. ಗಣಪತಿಯನ್ನು ಕುರಿತಾದ ಪುರಾಣಗಳೂ ಇವೆ; ಸ್ತೋತ್ರಸಾಹಿತ್ಯವೂ ಸಮೃದ್ಧವಾಗಿವೆ; ಅವನ ತತ್ತ್ವವನ್ನು ಎತ್ತಿಹಿಡಿರುವ ಉಪನಿಷತ್ತೂ ಇದೆ; ಅವನ ಶಿಲ್ಪ–ಚಿತ್ರಗಳಿಗೂ ಕೊರತೆಯಿಲ್ಲ; ಅವನ ಗುಡಿಗಳಿಗಂತೂ ಗಡಿಗಳೇ ಇಲ್ಲ; ಪ್ರಪಂಚದಾದ್ಯಂತ ಗಣಪತಿಯ ಆರಾಧನೆಯ ಕುರುಹುಗಳು ಸಿಗುತ್ತವೆ.

ಗಣೇಶನ ಹಬ್ಬ ನಮ್ಮ ದೇಶದ ದೊಡ್ಡ ಹಬ್ಬಗಳಲ್ಲಿ ಒಂದು. ಜಾತಿ, ಮತ, ಪ್ರಾಂತ, ಭಾಷೆಗಳ ಹಂಗಿಲ್ಲದೆ ಎಲ್ಲರನ್ನೂ ಬೆಸೆಯುತ್ತಿರುವ ಈ ಹಬ್ಬ ದಿಟವಾಗಿಯೂ ರಾಷ್ಟ್ರೀಯ ಹಬ್ಬವೇ ಸರಿ. ನಮ್ಮ ಕಾಲದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಗಣಪತಿಯ ತತ್ತ್ವಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಿಗೆ ಅವನು ವಿದ್ಯಾಗಣಪತಿಯಾಗಿ ವಿದ್ಯೆ–ಬುದ್ಧಿಗಳ ಒಡೆಯನಾಗಿ ಒದಗುತ್ತಾನೆ. ವಿನಯವನ್ನು ಮರೆತು ಅಹಂಕಾರದ ಪೀಠದಲ್ಲಿ ಕುಳಿತಿರುವ ಇಂದಿನ ಜನಾಂಗಕ್ಕೆ ಅವನು ಅರಿವಿನ ಅಂಕುಶವಾಗಬಲ್ಲ. ಅಪಹಾಸ್ಯವನ್ನೇ ಉದ್ಯಮವನ್ನಾಗಿಸಿಕೊಂಡಿರುವ ಮಾನಸಿಕತೆಗೆ ಅವನು ಆನಂದದ ಔಷಧವನ್ನು ಉಣಿಸುವ ಪೂರ್ಣಚಂದ್ರನಾಗಬಲ್ಲ. ಅವನು ಯೋಗಿಗಳಿಗೂ ಬೇಕಾದವನು, ಸಂಸಾರಿಗಳನ್ನೂ ಕಾಪಾಡುವವನು. ಸಾಧಕರ ಏಕಂತದಲ್ಲೂ ಅವನಿರುತ್ತಾನೆ, ಮಕ್ಕಳ ಆಟಪಾಠಗಳಲ್ಲೂ ನಲಿಯುತ್ತಿರುತ್ತಾನೆ; ಅವನು ಓಂಕಾರಕ್ಕೂ ಒಲಿಯುತ್ತಾನೆ, ಸಪ್ತಸ್ವರಗಳಿಗೂ ಕುಣಿಯುತ್ತಾನೆ. ಅವನನ್ನು ಯಜ್ಞದಿಂದಲೂ ಒಲಿಸಿಕೊಳ್ಳಬಹುದು, ಗರಿಕೆಯ ಹುಲ್ಲಿನಿಂದಲೂ ಪೂಜಿಸಬಹುದು. ಎಕ್ಕದ ಹೂವನ್ನು ಅಕ್ಕರೆಯಿಂದ ಸ್ವೀಕರಿಸುವ ಅವನು, ಸಕ್ಕರೆಯ ಕಡುಬನ್ನೂ ಚಪ್ಪರಿಸುವವನೇ.

ಗಣೇಶನಂಥ ಸರಳವೂ ಗಹನವೂ ಆದ ದೈವದ ಪರಿಕಲ್ಪನೆಯೇ ಸ್ವಾರಸ್ಯಕರ. ಭಾರತೀಯ ಸಂಸ್ಕೃತಿಯ ಸಂಭ್ರಮ, ಜೀವನೋತ್ಸಾಹ, ಆಧ್ಯಾತ್ಮಿಕತೆ, ಕಲಾಶ್ರೀಮಂತಿಕೆ, ಕೌಟುಂಬಿಕ ಸೌಹಾರ್ದ, ವಿದ್ಯೆಯ ಔದಾರ್ಯ, ಸಿದ್ಧಿಯ ನೆಲೆ, ಸೌಹಾರ್ದದ ಸೆಲೆ – ಇಂಥ ಹತ್ತುಹಲವು ಮಹಾತತ್ತ್ವಗಳ ಮಹಾದರ್ಶನವೇ ಗಣಪತಿಯ ಕಲ್ಪನೆಯಲ್ಲಿ ಸಾಕಾರಗೊಂಡಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ