ಬೆಂಗಳೂರು: ಹಿಂದಿ ಸೇರಿ ತೃತೀಯ ಭಾಷಾ ವಿಷಯಕ್ಕೆ ಸಂಬಂಧಿಸಿ ಗ್ರೇಡ್ ಬದಲು ಅಂಕವನ್ನೇ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಈ ಬಾರಿ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು, ನ್ಯಾಯಾಲಯದ ಆದೇಶದ ಬಗ್ಗೆ ಸಿಎಂ ಅವರ ಗಮನಕ್ಕೂ ತಂದಿದ್ದು, ತೃತೀಯ ಭಾಷಾ ವಿಷಯಕ್ಕೆ ಅಂಕವನ್ನೇ ನೀಡಲಾಗುತ್ತದೆ. ಯಾವುದೇ ಗೊಂದಲ ಇಲ್ಲ. ಫಲಿತಾಂಶ ಪ್ರಕಟಣೆ ವಿಳಂಬ ಆಗಲ್ಲ. ಗುರುವಾರವೇ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವ ಮಧು ಬಂಗಾರಪ್ಪ, ನ್ಯಾಯಾಲಯದ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸದೆ, ಆದೇಶವನ್ನು ಪಾಲನೆ ಮಾಡುವುದಾಗಿ ತಿಳಿಸಿ, ಗ್ರೇಡ್ ಬದಲು ಅಂಕ ನೀಡುವುದಾಗಿ ಹೇಳಿದರು. ಇದಕ್ಕೆ ಸಿಎಂ ಸಹ ಸಮ್ಮತಿಸಿದ್ದಾರೆ ಎಂದರು.
ಮಾ.18ರಿಂದ ಏ. 2 ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ 1ಕ್ಕೆ 8.30 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ತೃತೀಯ ಭಾಷಾ ಪರೀಕ್ಷೆ ನಡೆಯಲು ಕೆಲವೇ ದಿನ ಬಾಕಿ ಇದ್ದ ವೇಳೆ ಹೊಸ ವಿಷಯ ಪ್ರಕಟಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಬಾರಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವುದಾಗಿ ಹೇಳಿದ್ದರು.
ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಹಿಂದಿ ಶಿಕ್ಷಕರೂ ವಿರೋಧಿಸಿದ್ದರು. ನ್ಯಾಯಾಲಯ ಅಂಕ ನೀಡುವಂತೆಯೇ ಆದೇಶಿಸಿತ್ತು. ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ವೇಳೆಯೂ ನ್ಯಾಯಾಲಯ, ಅದೇ ಆದೇಶ ನೀಡಿತ್ತಲ್ಲದೆ, ಹಾಲಿ ಅಂಕ ನೀಡುವ ನಿಯಮ ಜಾರಿಯಲ್ಲಿ ಇರುವುದರಿಂದ ಅದನ್ನೇ ಪಾಲಿಸಿ ಎಂದೂ ತಾಕೀತು ಮಾಡಿತ್ತು.


