ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತ ಯುವ ಕ್ರಿಯಾಶೀಲ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರ ಅವಿರತ ಪರಿಶ್ರಮದಿಂದ ಫಲಿತಾಂಶ ಸುಧಾರಣೆಯಲ್ಲಿ ವಿಭಾಗದಲ್ಲಿ ಹೊಸ ಚೈತನ್ಯ ಮೂಡುತ್ತಿರುವುದು ಸಂತಸದ ಸಂಗತಿ. ಆದರೆ ಕೆಲ ಅಧಿಕಾರದ ದರ್ಪ ತೋರುವ ಅಧಿಕಾರಿಗಳು ಶಿಕ್ಷಕರನ್ನು ಇನ್ನಿಲ್ಲದಂತೆ ಹಿಂಡಿ ಹಿಪ್ಪಿ ಮಾಡುತ್ತಿರುವ ಸಂಗತಿಗಳು ಬೆಳಗಾವಿ ವಿಭಾಗಿಯ ಜಿಲ್ಲೆಗಳ ಶಿಕ್ಷಕ ವಲಯದಲ್ಲಿ ಅಸಮಾಧಾನ ಉಂಟು ಮಾಡಿವೆ. ಅಪರ ಆಯುಕ್ತರು ಕೂಡ ಚಿಂತನೆ ನಡೆಸಬೇಕಿದೆ.
ಜನ ಜೀವಾಳ ವಿಶೇಷ ಬೆಳಗಾವಿ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸುವ ನಿಟ್ಟಿನಲ್ಲಿ ಇದೀಗ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ಶಿಕ್ಷಕರ ಮೇಲೆ ಎಲ್ಲಿಲ್ಲದ ಒತ್ತಡ ಹೇರುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಸಲುವಾಗಿ ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅತಿಯಾದ ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ತಕ್ಷಣವೇ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಗೋಳು ಆಲಿಸುವಂತೆ ಶಿಕ್ಷಕರು ಈಗ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದಾರೆ.
2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ದೃಢವಾದ ಸಂಕಲ್ಪ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತೇರ್ಗಡೆ ಹೊಂದಲು 2025ರ ಜೂನ್ ತಿಂಗಳಿನಿಂದಲೇ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಕಷ್ಟು ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈಗಲೂ ಸಹ ಪರೀಕ್ಷೆ ಪ್ರಾರಂಭವಾಗುವ ವರೆಗೂ ಎಲ್ಲಾ ಶಿಕ್ಷಕರು ಸಾಕಷ್ಟು ಶ್ರಮ ಪಡುತ್ತಿದ್ದಾರೆ.
ಎಫ್ ಎಲ್ ಎನ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಗತಿ ಏರ್ಪಡಿಸಲಾಗುತ್ತಿದೆ. ಪಠ್ಯಕ್ರಮದ ಜೊತೆಗೆ ಎಲ್ ಬಿ ಎ ಆಧರಿತ ಪ್ರಶ್ನೆಗಳನ್ನು ರೂಢಿ ಮಾಡಿಸಲಾಗುತ್ತಿದೆ. ದಿನಾಲು ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ 9.30 ಮತ್ತು ಸಂಜೆ 4:30 ರಿಂದ 530 ವರೆಗೆ ವಿಶೇಷ ತರಗತಿಗಳನ್ನು ಮತ್ತು ಗುಂಪು ಚರ್ಚೆಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಗೈರುಹಾಜರು ಇರದಂತೆ ನೋಡಲಾಗುತ್ತಿದೆ. ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ತಪ್ಪದೆ ಭೇಟಿ ನೀಡುತ್ತಿದ್ದಾರೆ. ಪ್ರೌಢಶಾಲಾ ಶಿಕ್ಷಕರು ಈಗ ಬೆಳಗ್ಗೆ 9:00 ರಿಂದ ಸಂಜೆ 6 ಗಂಟೆವರೆಗೆ ಕಡ್ಡಾಯವಾಗಿ ಶಾಲೆಯಲ್ಲಿ ಕಳೆಯುತ್ತಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು
ತೇರ್ಗಡೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ದರಿರುವುದಿಲ್ಲ. ಅವರಿಗೆ ಶಿಕ್ಷಕರು ಸಾಕಷ್ಟು ಮನವರಿಕೆ ಮಾಡಿ ಕಲಿಸಿದರೂ ಯಾವ ರೀತಿಯ ಪ್ರಯೋಜನವೂ ಆಗದು. ಆದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ದಾಖಲೆಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿ ಇರಬೇಕು ಎಂಬ ಏಕೈಕ ಉದ್ದೇಶದಿಂದ ಇಡೀ ಶಿಕ್ಷಕ ಸಮುದಾಯದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ದಡ್ಡ ವಿದ್ಯಾರ್ಥಿಗಳಿಗೆ ಕಲಿಸುವುದಾದರೂ ಹೇಗೆ ?
ಇಂತಹ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸದೆ ಇರುವುದರಿಂದ ಅವರು ಈಗ ಪ್ರೌಢಶಾಲೆಯ ಹಂತದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿದ್ದರೆ ಈ ಸಂದರ್ಭದಲ್ಲಿ ಅವರು ತೊಂದರೆಯಲ್ಲಿ ಸಿಲುಕುತ್ತಿರಲಿಲ್ಲ. ಅದರಲ್ಲಿಯೂ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದರ ಪರಿಣಾಮ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಎನ್ನುವುದು ಅಗ್ನಿಪರೀಕ್ಷೆಯಾಗುತ್ತಿದೆ.
ಅದರಲ್ಲಿಯೂ ಈಗ ಕಬ್ಬಿಣದ ಕಡಲೆ ಎನಿಸಿಕೊಂಡಿರುವ ಗಣಿತ ಮತ್ತು ಇಂಗ್ಲಿಷ್ ನಲ್ಲಿ ಈ ವಿದ್ಯಾರ್ಥಿಗಳು ತೀರಾ ಕಳಪೆ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮೆಲ್ಲ ವಿದ್ಯೆಯನ್ನು ಧಾರೆ ಎರೆದರೂ ಕೆಲ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಅವರಿಗೆ ಯಾವ ವಿಧಾನದಲ್ಲಿ ಕಲಿಸುವುದು ಎನ್ನುವುದು ಶಿಕ್ಷಕರಿಗೆ ಗೊಂದಲ ತಂದಿದೆ.
ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಎಷ್ಟು ಹೇಳಿದರೂ ಅವರಿಗೆ ತಿಳಿಯದಾಗಿದೆ. ಅಧಿಕಾರಿಗಳೇ ಮುಂದೆ ಬಂದು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಓದಿಸಲಿ ಎನ್ನುವುದು ಪ್ರೌಢಶಾಲಾ ಶಿಕ್ಷಕರ ಸಂಘದ ಒತ್ತಾಯವಾಗಿದೆ.
ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿ ಶ್ರೇಷ್ಠ ಅಂಕ ಪಡೆದು ಆತ ತನ್ನ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂಬ ಏಕೈಕ ಗುರಿ ಇರುತ್ತದೆ. ಆದರೆ ಆ ನಿಟ್ಟಿನಲ್ಲಿ ಅವರು ಶಕ್ತಿ ಮೀರಿ ಪ್ರಯತ್ನಿಸುತ್ತಿರುವಾಗ ಪರೀಕ್ಷೆಯ ಈ ಸಂದರ್ಭದಲ್ಲಿ ಇಡೀ ಅಧಿಕಾರಿ ವರ್ಗ ಶಿಕ್ಷಕರ ಮೇಲೆ ಪ್ರಹಾರ ನಡೆಸುತ್ತಿರುವುದು ಖಂಡನೀಯವಾಗಿದೆ. ಇದರಿಂದ ಇಡೀ ಶಿಕ್ಷಕ ವಲಯವೇ ತತ್ತರಿಸಿ ಹೋಗಿದೆ. ತಾವು ಯಾಕಾದರೂ ಈ ವೃತ್ತಿಯನ್ನು ಆರಿಸಿಕೊಂಡೆವೋ ಎಂಬ ಜಿಗುಪ್ಸೆ ಶಿಕ್ಷಕ ವಲಯವನ್ನು ಎಸ್ಎಲ್ಸಿ ಪರೀಕ್ಷೆಯ ಈ ಸಂದಿಗ್ಧ ಕಾಲಘಟ್ಟದಲ್ಲಿ ಕಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
——-
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈಯ್ಯಲು ಶಿಕ್ಷಣ ಇಲಾಖೆ ಈಗ ಶಿಕ್ಷಕರಿಗೆ ಸಹಿಸಲಾರದ ಒತ್ತಡ ಮತ್ತು ಕಿರುಕುಳ ನೀಡುತ್ತಿದೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಇದು ನಿಜಕ್ಕೂ ಖಂಡನೀಯ. ಫಲಿತಾಂಶಕ್ಕೆ ಶಿಕ್ಷಕರು ಶಕ್ತಿಮೀರಿ ಪ್ರಯತ್ನ ಮಾಡಿದರೂ ಇಲಾಖೆಯ ಮಾನಸಿಕ ಕಿರುಕುಳ ನೋವಿನ ಸಂಗತಿ.
–ಅಶೋಕ ಅಣ್ಣಿಗೇರಿ
ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ
——
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶವಿದು…!: ಅ,ಆ,ಇ,ಈ ಬರದೇ 7 ನೇ ವರ್ಗ ಪಾಸ್ ಆಗಿ ಬರುವ ವಿದ್ಯಾರ್ಥಿಗಳಿಗೆ FLN class ಮಾಡಿ ಅ,ಆ,ಇ,ಈ ಕಲಿಸುವದರ ಜೊತೆಗೆ ಅವರನ್ನು SSLC ಪಾಸ್ ಮಾಡಿಸಲು ಸಹ ಶಿಕ್ಷಕರ ಮೇಲೆ ಒತ್ತಡ ಹೇರುತ್ತರುವುದು ಸರಿಯೇ?100% ರಿಸಲ್ಟ್ಸ್ ಎಲ್ಲ ಶಾಲೆಯವರು ಕೊಡಬೇಕು ಅಂದರೆ ಇದು ಸಾಧ್ಯ ಇದೇಯೇ? ಪ್ರೌಢ ಶಾಲೆಯ ಸಹ ಶಿಕ್ಷಕರು ಜಾದೂ ಮಾಡೋಕೆ ಆಗುತ್ತಾ ?
ಅ ಆ ಇ ಈ, ABCD ಬರದಿರುವವರನ್ನು SSLC ಪರೀಕ್ಷೆ ಪಾಸ್ ಮಾಡಿಸಲು ಇಷ್ಟೊಂದು ಒತ್ತಡ ಹಾಕುವದು ವೈಜ್ಞಾನಿಕ ವಾಗಿ ಸರಿಯೇ?
ಮಗುವಿನ ಕಲಿಕೆ ಕೇವಲ ಶಿಕ್ಷಕರನ್ನು ಅವಲಂಬಿಸಿದೆಯಾ? ವಿದ್ಯಾರ್ಥಿಗಳ ಬುದ್ದಿಮಟ್ಟ, ಮನೆಯ ಕೌಟುಂಬಿಕ ಹಿನ್ನೆಲೆ ಪರಿಸರದ ಪ್ರಭಾವ ಕಾರಣ ಇರುವದಿಲ್ಲವೇ ಎಂದು ಸಹ ಶಿಕ್ಷಕರು ಕೇಳುತ್ತಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಈಗ ಎಲ್ಲೇ ಮೀರಿದ ಒತ್ತಡ ಹೇರುತ್ತಿರುವ ಶಿಕ್ಷಣ ಇಲಾಖೆ


