ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಸಂಚಲನಕ್ಕೆ ಕಾರಣವಾಗಿದ್ದ ರೂ. 400 ಕೋಟಿ ದರೋಡೆ ಪ್ರಕರಣ ಇದೀಗ ರೋಚಕ ಹಂತಕ್ಕೆ ಬಂದು ತಲುಪಿದೆ. ಈ ಮೊದಲು ಬೆಳಗಾವಿ ಪೊಲೀಸರು ಈ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ನಾಸಿಕ್ ಪೊಲೀಸರು ಸಹ ಈ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನಗದು ಸಾಗಿಸುತ್ತಿದ್ದ ಟ್ರಕ್ ತಡೆದು ರೂ.400 ಕೋಟಿ ದೋಚಿ ಪರಾರಿಯಾಗಿದ್ದಾರೆ ಎಂದು ಚಾಲಕನೊಬ್ಬ ಸಲ್ಲಿಸಿದ್ದ ದೂರು ಸುಳ್ಳು, ಅಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ಇದೀಗ ಮಹಾರಾಷ್ಟ್ರದ ನಾಸಿಕ್ ಗ್ರಾಮೀಣ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಚಲಿಸುತ್ತಿದ್ದ ಟ್ರಕ್ ಅನ್ನು ಅಡ್ಡಹಾಕಿದ 7 ಮಂದಿ ಅನಾಮಿಕರು, ನನ್ನ ಮೇಲೆ ಹಲ್ಲೆ ಮಾಡಿ ಟ್ರಕ್ನಲ್ಲಿದ್ದ ರೂ.400 ಕೋಟಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಟ್ರಕ್ ಚಾಲಕ ಸಂದೀಪ ಪಾಟೀಲ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಎಲ್ಲಾ 7 ಆರೋಪಿಗಳನ್ನು ಇಗತ್ಪುರಿ ನ್ಯಾಯಾಲಯ ಬಿಡುಗಡೆ ಮಾಡಿದೆ. ನಕಲಿ ದೂರು ನೀಡಿದ್ದಕ್ಕಾಗಿ ಟ್ರಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2025ರ ಅಕ್ಟೋಬರ್ 22ರಂದು 7 ಜನರು ತಮ್ಮನ್ನು ದಾರಿ ತಪ್ಪಿಸಿ, ಅಪಹರಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಟ್ರಕ್ನಲ್ಲಿದ್ದ ರೂ.400 ಕೋಟಿ ಮೌಲ್ಯದ ರದ್ದಾದ ರೂ. 2000 ಮುಖಬೆಲೆಯ ನೋಟುಗಳನ್ನು ಲೂಟಿ ಮಾಡಿದ್ದಾರೆ ಎಂದು ಚಾಲಕ ಸಂದೀಪ ಪಾಟೀಲ ಘೋಟಿ ಪೊಲೀಸರಿಗೆ ದೂರು ನೀಡಿದ್ದರು.
ಇದು ಮೂರು ರಾಜ್ಯಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿದ್ದ ಸಂದೀಪ ಪಾಟೀಲ, ಟ್ರಕ್ನಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹವಾಲಾ ಹಣ ಸಾಗಿಸಲಾಗುತ್ತಿತ್ತು ಎಂದು ಹೇಳಿಕೊಂಡಿದ್ದರು.
ಸಂದೀಪ ಪಾಟೀಲ ಅವರು ಆರೋಪಿಸಿದ್ದ 7 ಜನರನ್ನು ನಾವು ಬಂಧಿಸಿದ್ದೇವೆ. ಆದರೆ, ತನಿಖೆಯಲ್ಲಿ ಅವರು ಹೇಳಿದಂತೆ ಆರೋಪಿಗಳ ಸಂಚಾರದ ಮಾರ್ಗ, ಕರೆ ದಾಖಲೆಗಳು, ಸಮಯ ಇತ್ಯಾದಿಗಳು ಹೋಲಿಕೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಗಮನಿಸಿದರೆ ಇಡೀ ಪ್ರಹಸನಕ್ಕೆ ಇದೀಗ ಅ ತೆರೆ ಬೀಳುವ ಸಾಧ್ಯತೆ ಕಂಡು ಬಂದಿದೆ.


