Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ತೃಣಮೂಲ Vs ತೃಣಮೂಲ ಕದನ ತೀವ್ರ : ಪಕ್ಷದ ಪ್ರಧಾನ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡ ಬಂಡಾಯ ಗುಂಪು

ಕೊಲ್ಕತ್ತಾ: ರಿತಬ್ರತ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಬಂಡಾಯ ಬಣವು ಕೊಲ್ಕತ್ತಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಪಕ್ಷದ ಮುಖ್ಯ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಫಿರ್ಹಾದ್ ಹಕೀಮ್, ಸಂದೀಪನ್ ಸಹಾ, ಜಾವೇದ್ ಖಾನ್ ಹಾಗೂ ಪಕ್ಷದ ಖಜಾಂಚಿ ಅಕ್ರುಜ್ಜಮಾನ ಸೇರಿದಂತೆ ಹಲವು ಶಾಸಕರೊಂದಿಗೆ ಕಚೇರಿಗೆ ಆಗಮಿಸಿದ ಬಂಡಾಯ ಬಣದ ನಾಯಕರು, ಕಚೇರಿಯ ಗೇಟ್‌ಗಳ ಬೀಗಗಳನ್ನು ಬದಲಾಯಿಸಿ, ಹೊಸ ಪೋಸ್ಟರ್‌ಗಳನ್ನು ಅಳವಡಿಸಿ, ಕಟ್ಟಡದೊಳಗೆ ಸಭೆಯನ್ನೂ ನಡೆಸಿದರು. ಈ ಕಟ್ಟಡವನ್ನೇ ಇನ್ನು ಮುಂದೆ ಪಕ್ಷದ ಅಧಿಕೃತ ಪ್ರಧಾನ ಕಚೇರಿಯಾಗಿ ಬಳಸುವುದಾಗಿ ಅವರು ಘೋಷಿಸಿದರು.
ಪಕ್ಷದ ಖಜಾಂಚಿ ಅಕ್ರುಜ್ಜಮಾನ್‌ ಮಾತನಾಡಿ, ತೃಣಮೂಲ ಕಾಂಗ್ರೆಸ್‌ಗೆ ಈ ಕಚೇರಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಕಟ್ಟಡದ ಮಾಲೀಕರೊಂದಿಗೆ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಮುಂದೆ ಎಲ್ಲಾ ಸಾಂಸ್ಥಿಕ ಮತ್ತು ಸಂಘಟನಾ ಕಾರ್ಯಗಳು ಇಲ್ಲಿಂದಲೇ ನಡೆಯಲಿವೆ ಎಂದು ಹೇಳಿದರು.

ಬಂಡಾಯ ಬಣವು ಕಚೇರಿಯ ಮುಂಭಾಗದ ಗೇಟ್‌ನಲ್ಲಿ ಹಿರಿಯ ಶಾಸಕ ಅರೂಪ ರಾಯ್ ಅವರನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಗುರುತಿಸುವ ಪೋಸ್ಟರ್‌ನ್ನೂ ಅಳವಡಿಸಿತು. ಆದರೆ, ಕಟ್ಟಡದೊಳಗಿದ್ದ ಮಮತಾ ಬ್ಯಾನರ್ಜಿ ಅವರ ಭಾವಚಿತ್ರಗಳು ಹಾಗೂ ಕಟ್‌ಔಟ್‌ಗಳನ್ನು ಹಾಗೆಯೇ ಉಳಿಸಲಾಯಿತು.
ರಿತಬ್ರತ ಬ್ಯಾನರ್ಜಿ ಮಾತನಾಡಿ, ಶನಿವಾರದಿಂದ ಈ ಕಚೇರಿಯಿಂದಲೇ ಪಕ್ಷದ ಅಧಿಕೃತ ಕಾರ್ಯಾಚರಣೆ ಆರಂಭವಾಗಲಿದೆ. “ನಾವೇ ತೃಣಮೂಲ ಕಾಂಗ್ರೆಸ್. ಇದೇ ನಮ್ಮ ಪ್ರಧಾನ ಕಚೇರಿ,” ಎಂದು ಅವರು ಘೋಷಿಸಿದರು.
2022ರಿಂದ ಈ ಕಟ್ಟಡವೇ ತೃಣಮೂಲ ಕಾಂಗ್ರೆಸ್‌ನ ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಕ್ಷದ ಮೂಲ ಕಚೇರಿ ಪುನರ್‌ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆಗ ಈ ಕಚೇರಿಗೆ ಸ್ಥಳಾಂತರಿಸಲಾಗಿತ್ತು.

'ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆ
ಈ ಬೆಳವಣಿಗೆಗೆ ಒಂದು ದಿನ ಮೊದಲು ರಿತಬ್ರತ ಬ್ಯಾನರ್ಜಿ ಹಾಗೂ ಅವರ ಬೆಂಬಲಿಗರು ದೆಹಲಿಗೆ ತೆರಳಿ ಚುನಾವಣಾ ಆಯೋಗದ ಪೂರ್ಣ ಪೀಠವನ್ನು ಭೇಟಿಯಾಗಿ, ಪಕ್ಷದ ಹೆಸರು, ಚುನಾವಣಾ ಚಿಹ್ನೆ, ಸಂಘಟನಾ ರಚನೆ ಹಾಗೂ ಪಕ್ಷದ ಆಸ್ತಿಗಳ ಮೇಲಿನ ಹಕ್ಕು ತಮ್ಮದೇ ಎಂಬ ವಾದ ಮಂಡಿಸಿದ್ದರು.
ಗುರುವಾರ ಬಂಡಾಯ ಬಣದ ನಿಯೋಗದೊಂದಿಗೆ ನಡೆದ ಸಭೆಯ ಬಳಿಕ, ಚುನಾವಣಾ ಆಯೋಗವು ಎರಡೂ ಬಣಗಳಿಗೆ ಪತ್ರ ಬರೆದು, ಸಂಘಟನಾ ಚುನಾವಣೆಗಳು, ಅಧಿಕೃತ ಸಹಿದಾರರು ಹಾಗೂ ಪಕ್ಷದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪ್ರತಿವಾದಗಳನ್ನು ಜುಲೈ 6ರ ಸಂಜೆ 5:30ರೊಳಗೆ ಸಲ್ಲಿಸುವಂತೆ ಸೂಚಿಸಿದೆ.

ಕಚೇರಿ ವಶಪಡಿಸಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಪರ ನಿಷ್ಠರಾಗಿರುವ ತೃಣಮೂಲ ಕಾಂಗ್ರೆಸ್ ಶಾಸಕರು ಕಚೇರಿಗೆ ಆಗಮಿಸಿದರು. ಆದರೆ, ಗೇಟ್‌ಗಳಿಗೆ ಬೀಗ ಹಾಕಲಾಗಿದ್ದರಿಂದ ಅವರು ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಹಿರಿಯ ತೃಣಮೂಲ ನಾಯಕ ಕುನಾಲ್ ಘೋಷ್ ಈ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದರು. ಪಕ್ಷದ ಯಾವುದೇ ಶಾಸಕರಿಗೂ ಪಕ್ಷದ ಕಚೇರಿಗೆ ಬರುವ ಹಕ್ಕಿದೆ. ಹಾಗಿದ್ದರೂ ಬೀಗ ಹಾಕುವ ಅಗತ್ಯವೇನು ಎಂದು ಪ್ರಶ್ನಿಸಿದರು.
“ತೃಣಮೂಲ ಕಾರ್ಯಕರ್ತರ ಮೇಲೆ ದಾಳಿ ನಡೆದಾಗ ಅವರಿಗೆ ಬೆಂಬಲ ನೀಡಲು ಇವರು ತಮ್ಮ ಕ್ಷೇತ್ರಗಳಿಗೆ ಹೋಗುವುದಿಲ್ಲ. ಬದಲಾಗಿ, ಬೇರೆಯವರ ಕೈಗೊಂಬೆಗಳಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ,” ಎಂದು ಕುನಾಲ್ ಘೋಷ್ ಆರೋಪಿಸಿದರು.

ಈ ಕಚೇರಿಯನ್ನು ಬಂಡಾಯ ಬಣವು ವಶಪಡಿಸಿಕೊಳ್ಳುವ ಕ್ರಮಕ್ಕೆ ರಾಜ್ಯ ಆಡಳಿತ ಮತ್ತು ಪೊಲೀಸರ ಮೌನ ಬೆಂಬಲವಿದೆ ಎಂದು ಮಮತಾ ಬ್ಯಾನರ್ಜಿ ಬಣವು ಆರೋಪಿಸಿದೆ. ಆದರೆ, ಈ ಆರೋಪವನ್ನು ಬಂಡಾಯ ಬಣ ಸಂಪೂರ್ಣವಾಗಿ ತಳ್ಳಿಹಾಕಿದೆ.
ಕಳೆದ ತಿಂಗಳು ಬಂಡಾಯ ಬಣವು ವಿಶೇಷ ಅಧಿವೇಶನ ನಡೆಸಿ ಅರೂಪ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಇದೇ ವೇಳೆ ಸಮಾನಾಂತರ ರಾಷ್ಟ್ರೀಯ ನಾಯಕತ್ವದ ರಚನೆಯನ್ನೂ ಘೋಷಿಸಿತ್ತು.
ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಿತಬ್ರತ ಬ್ಯಾನರ್ಜಿ ಅವರ ಹಕ್ಕನ್ನು ಪಕ್ಷದ 80 ಶಾಸಕರ ಪೈಕಿ 58 ಮಂದಿ ಬೆಂಬಲಿಸಿ, ಅಧಿಕೃತ ಅಭ್ಯರ್ಥಿಯನ್ನು ತಿರಸ್ಕರಿಸಿದ್ದರು. ಇದೀಗ ಬಂಡಾಯ ಬಣವು ಸುಮಾರು 65 ಶಾಸಕರ ಬೆಂಬಲ ತಮ್ಮೊಂದಿಗಿದೆ ಎಂದು ಹೇಳಿಕೊಂಡಿದೆ.
ತೃಣಮೂಲ ಕಾಂಗ್ರೆಸ್‌ನ 28 ಲೋಕಸಭಾ ಸದಸ್ಯರ ಪೈಕಿ 20 ಮಂದಿ ಈಗಾಗಲೇ ಪಕ್ಷದಿಂದ ಬೇರ್ಪಟ್ಟು, ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜೊತೆ ವಿಲೀನಗೊಂಡು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರಿದ್ದಾರೆ. ಪಕ್ಷದ ಇನ್ನೂ ಹಲವಾರು ಹಿರಿಯ ನಾಯಕರು ಮಮತಾ ಬ್ಯಾನರ್ಜಿ ಬಣದಿಂದ ದೂರ ಉಳಿದಿದ್ದಾರೆ.
ಪ್ರಸ್ತುತ ವಿವಾದವು ಕೇವಲ ನಾಯಕತ್ವಕ್ಕೆ ಸೀಮಿತವಾಗಿಲ್ಲ. ತೃಣಮೂಲ ಕಾಂಗ್ರೆಸ್‌ನ ಹೆಸರು, ಚುನಾವಣಾ ಚಿಹ್ನೆ, ಸಂಘಟನಾ ವ್ಯವಸ್ಥೆ, ಹಣಕಾಸು ಮತ್ತು ಪಕ್ಷದ ಆಸ್ತಿಗಳ ಮೇಲಿನ ಹಕ್ಕಿನ ವಿಚಾರದಲ್ಲೂ ಎರಡೂ ಬಣಗಳು ತಮ್ಮದೇ ಹಕ್ಕು ಇದೆ ಎಂದು ಪಟ್ಟು ಹಿಡಿದಿದ್ದು, ಪಕ್ಷದೊಳಗಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇ-ರಿಕ್ಷಾ ಬ್ಯಾಟರಿ ಸ್ಥಗಿತಗೊಳಿಸಬಲ್ಲ ಆ್ಯಪ್‌ಗಳ ತೆರವಿಗೆ ಗೂಗಲ್‌, ಆಪಲ್‌ಗೆ ಕೇಂದ್ರ ಸರ್ಕಾರದ ಸೂಚನೆತೃಣಮೂಲ Vs ತೃಣಮೂಲ ಕದನ ತೀವ್ರ : ಪಕ್ಷದ ಪ್ರಧಾನ ಕಚೇರಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡ ಬಂಡಾಯ ಗುಂಪುನಾಗರಿಕ ಸೇವೆ ಪರೀಕ್ಷೆ ಬಗ್ಗೆ ಜಾಗೃತಿ ಪ್ರವೇಶ ಪರೀಕ್ಷೆ ದಿನಾಂಕ ನಿಗದಿಉಗ್ರರಿಗೆ ಬೆಂಬಲ ನೀಡೋದು ನಿಲ್ಲುವವರೆಗೂ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಇರಲಿದೆ : ಪಾಕ್‌ಗೆ ಭಾರತದ ಖಡಕ್ ಸಂದೇಶಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು : ಸಮಸ್ಯೆ ಬಗೆಹರಿಸಲು ಹೈಕಮಾಂಡ್‌ಗೆ ಚನ್ನಿ ಬಣದ ಗಡುವು; ಅಮಿತ್ ಶಾ ಭೇಟಿಯಾದ ರಾಂಧವಾಅದೇ ಮಾತ್ರೆ ; ಅಮೆರಿಕದಲ್ಲಿ ₹85 ಸಾವಿರ…ಭಾರತದಲ್ಲಿ ₹35 ! ‘ನಮ್ಮನ್ನು ದರೋಡೆ ಮಾಡಲಾಗ್ತಿದೆ ಎಂದ ಅಮೆರಿಕ ಮಹಿಳೆಸೋರುತ್ತಿದ್ದ ಗಣಿಕೊಪ್ಪ ಶಾಲೆಗೆ ಹಲವರಿಂದ ದೇಣಿಗೆಸೋರುತ್ತಿದ್ದ ಗಣಿಕೊಪ್ಪ ಶಾಲೆಗೆ ಹಲವರಿಂದ ದೇಣಿಗೆಬೆಳಗಾವಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಪುಂಡಲೀಕ ಚವಾಣ  ಅಧಿಕಾರ ಸ್ವೀಕಾರಬೆಳಗಾವಿಯ ಜಲಪಾತಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ