ನವದೆಹಲಿ : ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಗೆ ಹೊಸ ಚೈತನ್ಯ ತಂದವರು. ಲಾರ್ಡ್ಸ್ ನಲ್ಲಿ ಭಾನುವಾರ
ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ಅಂತರ ರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ.
ಫಾರ್ಮ್ ಮತ್ತು ಫಿಟ್‌ನೆಸ್‌ನಿಂದಾಗಿ ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮಧ್ಯೆ ಸಹಮತವಿದೆ. ಆದರೆ, ರೋಹಿತ್ ವಿಷಯದಲ್ಲಿ ಈ ಒಮ್ಮತವಿಲ್ಲ.
ಆರಂಭಿಕ ಬ್ಯಾಟರ್ ಆಗಿರುವ 39 ವರ್ಷದ ರೋಹಿತ್ ಅವರನ್ನು ಮುಂದಿನ ಸರಣಿಗೆ ತಂಡಕ್ಕೆ ಪರಿಗಣಿಸಲು ರಾಷ್ಟ್ರೀಯ ಆಯ್ಕೆ ಸಮಿತಿ ಉತ್ಸುಕವಾಗಿಲ್ಲ ಎಂದು ತಿಳಿದುಬಂದಿದೆ. ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಮಾಜಿ ನಾಯಕ ರೋಹಿತ್ ಅವರು ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡಕ್ಕೆ ಆಡುತ್ತಿದ್ದಾರೆ.
ಕೊನೆಯ ಎಂಟು ಏಕದಿನ ಪಂದ್ಯಗಳಲ್ಲಿ ರೋಹಿತ್ ಅವರು 30.1ರ ಸರಾಸರಿಯಲ್ಲಿ ಮತ್ತು 88.6ರ ಸ್ಟೈಕ್ ರೇಟ್‌ನಲ್ಲಿ ಒಟ್ಟು 241 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಲಯಕ್ಕೆ ಪರದಾಡುತ್ತಿರುವ ಅವರನ್ನು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸುವುದು ಅನುಮಾನ ಎನ್ನಲಾಗಿದೆ.
ಮೂರು ಇನಿಂಗ್ಸ್‌ಗಳಲ್ಲಿ ಎರಡು ಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡಲು ರಾಷ್ಟ್ರೀಯ ಆಯ್ಕೆಗಾರರು ಆಸಕ್ತಿ ತೋರಿದ್ದಾರೆ.