Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಾಮಪತ್ರ ರದ್ದು ; ಕೈ ನಾಯಕರ ಪ್ರತಿಭಟನೆ

Advertisement

 ಭೋಪಾಲ : ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಇದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅವರು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ (ಅಫಿಡವಿಟ್) ಪ್ರಕರಣವೊಂದರ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರು ಚುನಾವಣಾಧಿಕಾರಿಗೆ ಔಪಚಾರಿಕ ದೂರು ನೀಡಿ, ಮೀನಾಕ್ಷಿ ನಟರಾಜನ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. ತೆಲಂಗಾಣದಲ್ಲಿ ಅವರ ವಿರುದ್ಧ ಬಾಕಿ ಇರುವ ಕೋರ್ಟ್ ಪ್ರಕರಣದ ವಿವರಗಳನ್ನು ಅವರು ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟಿರುವುದು ಜನಪ್ರತಿನಿಧಿ ಕಾಯ್ದೆ 1951ರ ಉಲ್ಲಂಘನೆಯಾಗುವುದರಿಂದ, ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಬಿಜೆಪಿ ವಾದಿಸಿತ್ತು. ಇದನ್ನು ಪುರಸ್ಕರಿಸಿದ ಚುನಾವಣಾಧಿಕಾರಿಗಳು ನಾಮಪತ್ರವನ್ನು ರದ್ದುಗೊಳಿಸಿದ್ದಾರೆ.

ಆರೋಪ ನಿರಾಕರಿಸಿದ ಕಾಂಗ್ರೆಸ್‌

ಕಾಂಗ್ರೆಸ್‌ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು, “ಬಿಜೆಪಿಯು ಒಬ್ಬ ಗಾಂಧಿವಾದಿ ಮಹಿಳೆಯನ್ನು ನೋಡಿ ಹೆದರಿದೆ. ಕಾಂಗ್ರೆಸ್‌ನ ಗೆಲುವಿನ ಭೀತಿಯಿಂದ ಬಿಜೆಪಿ ಈ ರೀತಿ ಮಾಡುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ವಿವೇಕ ತಂಖಾ ಅವರು ಟ್ವೀಟ್ ಮಾಡಿ, “ಮೀನಾಕ್ಷಿ ನಟರಾಜನ್ ಅವರ ನಾಮಪತ್ರದ ಬಗ್ಗೆ ಗೊಂದಲ ಹರಡಲಾಗುತ್ತಿದೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ (FIR ಆಗಿಲ್ಲ). ಕೇವಲ 10 ಕೋಟಿ ರೂಪಾಯಿ ಪರಿಹಾರದ ಪ್ರಕ್ರಿಯೆಯನ್ನು ಯಾಕೆ ಆರಂಭಿಸಬಾರದು ಎಂದು ಕೇಳಿ ನ್ಯಾಯಾಲಯದಿಂದ ನೋಟಿಸ್ ಮಾತ್ರ ಬಂದಿದೆ. ಅದಕ್ಕೆ ಅವರ ವಕೀಲರು ಉತ್ತರಿಸಿದ್ದಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಅಧಿಕೃತವಾಗಿ ದಾಖಲಾಗಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ಘೋಷಿಸಬೇಕೇ ಹೊರತು, ಇಂತಹ ಸಾಮಾನ್ಯ ನೋಟಿಸ್‌ಗಳನ್ನಲ್ಲ” ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ರಾಜಕೀಯದ ಮೇಲಾದ ಪರಿಣಾಮ
ಮಧ್ಯಪ್ರದೇಶದ 3 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಿಗದಿಯಾಗಿದೆ. 230 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಿಜೆಪಿ: 164 ಶಾಸಕರನ್ನು ಹೊಂದಿದ್ದು, 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಆದರೂ ಬಿಜೆಪಿಗೆ ಇನ್ನೂ 48 ಹೆಚ್ಚುವರಿ ಮತಗಳು ಉಳಿಯುತ್ತವೆ. 3ನೇ ಸ್ಥಾನವನ್ನು ಗೆಲ್ಲಲು ಅವರಿಗೆ ಇತರ ಪಕ್ಷಗಳ ಬೆಂಬಲ ಅಥವಾ ಕ್ರಾಸ್ ವೋಟಿಂಗ್ (ಪಕ್ಷಾಂತರ ಮತಗಳು) ಅಗತ್ಯವಿತ್ತು.
ಕಾಂಗ್ರೆಸ್ಸಿನಲ್ಲಿ ಒಟ್ಟು 63 ಶಾಸಕರಿದ್ದಾರೆ. ಆದರೆ ರಾಜೇಂದ್ರ ಭಾರ್ತಿ ಮತ್ತು ಮುಖೇಶ ಮಲ್ಹೋತ್ರಾ ಎಂಬ ಇಬ್ಬರು ಶಾಸಕರು ಮತ ಚಲಾಯಿಸಲು ಅರ್ಹರಲ್ಲದ ಕಾರಣ, ಕಾಂಗ್ರೆಸ್‌ನ ಸದ್ಯದ ಪರಿಣಾಮಕಾರಿ ಬಲ 61 ಆಗಿದೆ. ಹೀಗಾಗಿ ಮೂರನೇ ಸ್ಥಾನಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿತ್ತು.
ಬದಲಾದ ಕಾಂಗ್ರೆಸ್ ತಂತ್ರ:
ತಮ್ಮ ಶಾಸಕರನ್ನು ಸೆಳೆಯಲು (ಪೋಚಿಂಗ್) ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಕ್ರಾಸ್ ವೋಟಿಂಗ್ ತಡೆಯಲು ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕಕ್ಕೆ ಶಿಫ್ಟ್ ಮಾಡಲು ಜೂನ್ 9ರಂದು ಸಿದ್ಧತೆ ನಡೆಸಿತ್ತು. ಶಾಸಕರಿಗಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಮೀನಾಕ್ಷಿ ನಟರಾಜನ್ ಅವರ ನಾಮಪತ್ರವೇ ತಿರಸ್ಕಾರಗೊಂಡಿದ್ದರಿಂದ ಇಡೀ ರಾಜಕೀಯ ಚಿತ್ರಣ ಬದಲಾಯಿತು. ಮೂರನೇ ಸೀಟಿನ ಸ್ಪರ್ಧೆ ಸಂಪೂರ್ಣವಾಗಿ ಬಿಜೆಪಿಯ ಪರವಾಗಿ ವಾಲಿರುವುದರಿಂದ, ವಿಮಾನದ ಹಾರಾಟವನ್ನು ತಡೆದು, ಶಾಸಕರನ್ನು ವಾಪಸ್ ಕರೆಯಿಸಿಕೊಳ್ಳಲಾಯಿತು.

ದೆಹಲಿಯಲ್ಲಿ ಕಾಂಗ್ರೆಸ್ ಭಾರಿ ಪ್ರತಿಭಟನೆ
ನಾಮಪತ್ರ ರದ್ದತಿಯನ್ನು ಖಂಡಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ನೇತೃತ್ವದ ನಿಯೋಗ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯಾದ ‘ನಿರ್ವಾಚನ ಸದನ’ದ ಹೊರಗೆ ದಿಢೀರ್ ಧರಣಿ ಸತ್ಯಾಗ್ರಹ ನಡೆಸಿತು. ಸಂಜೆ 7 ಗಂಟೆಯಾಗಿದ್ದರಿಂದ ಅಧಿಕಾರಿಗಳು ಮನೆಗೆ ತೆರಳಿದ್ದಾರೆ ಎಂದು ಹೇಳಿ ಆರಂಭದಲ್ಲಿ ಕಾಂಗ್ರೆಸ್ ನಾಯಕರಿಗೆ ಒಳಗಡೆ ಪ್ರವೇಶ ನಿರಾಕರಿಸಲಾಯಿತು. ಕೇಂದ್ರ ದೆಹಲಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದಾಗ ಅಲ್ಲಿ ಹೈಡ್ರಾಮಾ ಸೃಷ್ಟಿಯಾಯಿತು. ಕೊನೆಗೆ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಬಳಿಕ, ಕೆ.ಸಿ. ವೇಣುಗೋಪಾಲ ಮತ್ತು ಭೂಪೇಶ ಬಘೇಲ್ ಅವರಿಗೆ ಮಾತ್ರ ಚುನಾವಣಾ ಆಯೋಗದ ಕಚೇರಿಯೊಳಗೆ ಹೋಗಲು ಅನುಮತಿ ನೀಡಲಾಯಿತು. ಕಾಂಗ್ರೆಸ್ ನಿಯೋಗವು ಈ ಅನ್ಯಾಯದ ವಿರುದ್ಧ ಆಯೋಗದ ಮಧ್ಯಸ್ಥಿಕೆಗೆ ಆಗ್ರಹಿಸಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಹರು ಹಿಂದಿಕ್ಕಿ ಭಾರತದಲ್ಲಿ ಅತಿ ದೀರ್ಘಾವಧಿ ಅಧಿಕಾರ ನಡೆಸಿದ ‘ಚುನಾಯಿತ ಪ್ರಧಾನಿ’ ಎಂಬ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಿ ಮೋದಿಪಾಕಿಸ್ತಾನದ ವಿರುದ್ಧ ಪಿಒಕೆಯಲ್ಲಿ ಕೋಲಾಹಲ : ನಾಲ್ವರು ಪ್ರಮುಖರ ಸುಳಿವು ಕೊಟ್ಟವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ಪಾಕಿಸ್ತಾನ4399 ದಿನಗಳ ಕಾಲ ಅಪ್ರತಿಮ ಜನಸೇವೆಗೈದ ಪ್ರಧಾನಿಗಳ ಕಾರ್ಯ ಶ್ಲಾಘನೀಯ : ಸಂಸದ ಜಗದೀಶ ಶೆಟ್ಟರ್ಮಾಜಿ ಸಚಿವ ಪ್ರಕಾಶ ಹುಕ್ಕೇರಿಯವರಿಗೆ ಮತ್ತೆ ಮಹತ್ವದ ಹುದ್ದೆಮಹಾಜನ್ ಆಯೋಗದ ಕಾಲಕ್ಕೆ ನನ್ನ ತಂದೆ ನೂರುದ್ದೀನ್ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕೆಂದು ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ನಾಯಕ ಎಂದು ನೆನಪಿಸಿಕೊಂಡ ಬೆಳಗಾವಿ ಶಾಸಕವಿಚಿತ್ರ ಮದುವೆ… ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಾಮಪತ್ರ ರದ್ದು ; ಕೈ ನಾಯಕರ ಪ್ರತಿಭಟನೆಪಿಒಕೆಯಲ್ಲಿ ಜನಾಕ್ರೋಶ, ಭುಗಿಲೆದ್ದ ಹಿಂಸಾಚಾರ: 30ಕ್ಕೂ ಹೆಚ್ಚು ಸಾವು, 200ಕ್ಕೂ ಅಧಿಕ ಜನರಿಗೆ ಗಾಯ10.31 ಲಕ್ಷ ರೂ.ಹೆರಾಯಿನ್ ವಶಪಡಿಸಿಕೊಂಡು ಮೂವರ ಬಂಧಿಸಿದ ಬೆಳಗಾವಿ ಪೊಲೀಸರು ಕಾರು ಚಾಲನೆ ಮಾಡಿದ ಬಾಲಕನ ತಪ್ಪಿಗೆ ಪಾಲಕರಿಗೆ  ದಂಡ ವಿಧಿಸಿದ ಪೊಲೀಸರು