ಬೆಂಗಳೂರು: ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳು ಭಾರಿ ಮಳೆಯಾಗುವ ಮುನ್ಸೂಚನೆಯಿದೆ.
ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಜುಲೈ 8ರಂದು ಭಾರಿಯಿಂದ ಅತಿ ಭಾರಿ ಮಳೆಯಾಗುವ ಸೂಚನೆಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಈ ಏಳು ಜಿಲ್ಲೆಗಳ ಜನತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.
ಜುಲೈ 8ರಂದು ಘಟ್ಟ ಪ್ರದೇಶಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗುವ ಮುನ್ನೆಚ್ಚರಿಕೆಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ನೀಡಿದೆ.
ದಕ್ಷಿಣ ಕನ್ನಡ ಕರಾವಳಿಗೆ ಎತ್ತರದ ಅಲೆಗಳ ಎಚ್ಚರಿಕೆ ನೀಡಲಾಗಿದ್ದು. ಮುಲ್ಕಿಯಿಂದ ಮಂಗಳೂರಿನವರೆಗೆ. ಜುಲೈ 09ರ ಮಧ್ಯಾಹ್ನ 02.30 ಗಂಟೆಯವರೆಗೆ 3.5 ರಿಂದ 3.5 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇದೆ.
ಉಡುಪಿ ಜಿಲ್ಲೆಯ ಬೈಂದೂರಿನಿಂದ ಕಾಪುವರೆಗೆ ಜುಲೈ 9 ರ ಬೆಳಿಗ್ಗೆ 11.30 ಗಂಟೆಯವರೆಗೆ 3.4 ರಿಂದ 3.5 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇದೆ. ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ. ಜುಲೈ 9 ರ ಸಂಜೆ 5.30 ಗಂಟೆಯವರೆಗೆ 3.2 ರಿಂದ 3.5 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇದೆ.
ಮೂರು ಜಿಲ್ಲೆಗಳ ಸಮುದ್ರ ಚಟುವಟಿಕೆಗಳು ಮತ್ತು ಕರಾವಳಿ ತೀರದ ಮನರಂಜನಾ ಚಟುವಟಿಕೆಗಳ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಬೆಂಗಳೂರು (ಗ್ರಾಮಾಂತರ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಂಟೆಗೆ 50-60 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.