ಕುಂದಾಪುರ :
ಹಿಂದುತ್ವ ಭಾಷಣಗಾರ್ತಿ ಹಾಗೂ ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಐದು ಪ್ರಕರಣಗಳಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.ಸುಮಾರು ಒಂಬತ್ತು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ ನ್ಯಾಯ ದೊರೆತಿದೆ ಎಂದು ಹೇಳಿರುವ ಚೈತ್ರಾ, ತಮ್ಮ ಜೀವನದ ಹೋರಾಟದ ಅನುಭವಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
“ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲ' ಎಂಬ ಮಾತಿನೊಂದಿಗೆ ಆರಂಭವಾದ ಹೋರಾಟ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಗಂಗಾವತಿಯೊಂದಿಗಿನ ಕೊನೆಯ ಬಂಧವೂ
ಕಳಚಿಕೊಂಡಿದೆ” ಎಂದು ಅವರು ಬರೆದುಕೊಂಡಿದ್ದಾರೆ.
“ಒಂಬತ್ತು ವರ್ಷಗಳಲ್ಲಿ ಐದು ಪ್ರಕರಣಗಳನ್ನು ಎದುರಿಸಿದ್ದೇನೆ. ಇವೆಲ್ಲವೂ ಒಂದು ಚಿಂತನೆ ಮತ್ತು ಒಂದು ರಾಜಕೀಯ ಪಕ್ಷಕ್ಕಾಗಿ ಎದುರಿಸಿದ ಹೋರಾಟಗಳಾಗಿವೆ. ಈ ಪಯಣದಲ್ಲಿ ರಾಜಕೀಯ ಪಿತೂರಿಗಳು, ನಂಬಿದವರಿಂದಾದ ನಿರಾಸೆಗಳು ಹಾಗೂ ಬದುಕಿನ ಪಾಠಗಳನ್ನು ಕಲಿತಿದ್ದೇನೆ” ಎಂದು ಅವರು ಉಲ್ಲೇಖಿಸಿದ್ದಾರೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಹಿಂದುತ್ವ ಪರ ಪ್ರಚಾರ ನಡೆಸಿದ್ದ ವೇಳೆ ಚೈತ್ರಾ ಕುಂದಾಪುರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಅವಹೇಳನಕಾರಿ ಹೇಳಿಕೆ, ತೇಜೋವಧೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇದೀಗ ಎಲ್ಲ ಐದು ಪ್ರಕರಣಗಳಲ್ಲೂ ತಮಗೆ ನ್ಯಾಯ ಸಿಕ್ಕಿದ್ದು, ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ ಎಂದು ಚೈತ್ರಾ ತಿಳಿಸಿದ್ದಾರೆ.
“ಇಂದು ವಯಸ್ಸಿನ ಹಂಗಿಲ್ಲದೆ ಲಕ್ಷಾಂತರ ಜನರು ನನ್ನನ್ನು 'ಅಕ್ಕಾ' ಎಂದು ಕರೆಯುತ್ತಾರೆ. ಅದಕ್ಕಿಂತ ದೊಡ್ಡ ಪ್ರೀತಿ ನನಗೆ ಬೇರೆ ಇಲ್ಲ” ಎಂದು ಅವರು ತಮ್ಮ ಭಾವುಕ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.
