Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾವೇರಿ : ಬಂದ್ ಕೈಬಿಡಲು ಎಲ್ಲಾ ಸಂಘಟನೆಗಳ ಮುಖಂಡರಿಗೆ ಸಿಎಂ ಮನವಿ

ಬೆಂಗಳೂರು:

"ಕಾವೇರಿ ಭಾಗದ ಅಣೆಕಟ್ಟುಗಳಲ್ಲಿ ಒಳ ಹರಿವಿನ ಪ್ರಮಾಣ 67-68 ಸಾವಿರ ಕ್ಯೂಸೆಕ್ಸ್ ನಷ್ಟಿದ್ದು, ಕುಡಿಯುವ ಉದ್ದೇಶಕ್ಕೆ ಹಾಗೂ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಕಾವೇರಿ ನದಿ ನೀರಿನ ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 

"ಇಂದಿನ ಸರ್ವಪಕ್ಷ ಸಭೆ ಬಗ್ಗೆ ಇಡೀ ರಾಜ್ಯ ಕುತೂಹಲದಿಂದ ನೋಡುತ್ತಿತ್ತು.  ನಾನು 2 ತಿಂಗಳ ಹಿಂದೆ ಸಿಎಂ ಜವಾಬ್ದಾರಿ ವಹಿಸಿದ್ದೇನೆ. ನಾನು ಕಾವೇರಿ ಕಣಿವೆಯಲ್ಲಿ ಹುಟ್ಟಿದ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರ ರಕ್ಷಣೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಹಿಂದೆ ಎಲ್ಲಾ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಲಾಗಿತ್ತು" ಎಂದರು. 

"ಬಂಗಾರಪ್ಪ ಅವರ ಕಾಲದಿಂದ ಇಲ್ಲಿಯವರೆಗೆ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ನಮ್ಮ ಸರ್ಕಾರ ಆಡಳಿತ ಮಾಡಿಕೊಂಡು ಬಂದಿದೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲೂ ಅವರು ಅವರದೇ ಆದ ಪ್ರಯತ್ನ ಮಾಡಿದ್ದಾರೆ" ಎಂದರು. 

"ಮಳೆ ಬಾರದೆ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಕೇವಲ 30-35%ರಷ್ಟು ಮಾತ್ರ ಮಳೆಯಾಗಿದೆ. ನಾವು ಮಾರ್ಗದರ್ಶನ ನೀಡುವವರೆಗೆ ಬೆಳೆ ಹಾಕಿಕೊಳ್ಳಬೇಡಿ ಎಂದು ನಾವು ರೈತರಿಗೆ ಮನವಿ ಮಾಡಿದ್ದೇವೆ. ತಮಿಳುನಾಡು 9 ಟಿಎಂಸಿ ನೀರು ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಆದೇಶ ನೀಡಿದೆ" ಎಂದು ತಿಳಿಸಿದರು.

"ಈ ಆದೇಶ ಬಂದಾಗ ನಮ್ಮ ಅಣೆಕಟ್ಟುಗಳು ತುಂಬಿರಲಿಲ್ಲ. ಮಳೆಯೂ ಇರಲಿಲ್ಲ. ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆಯಾಗಿದ್ದು, ನಮ್ಮ ಪರಿಸ್ಥಿತಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ. ಭಾನುವಾರ ಮಧ್ಯಾಹ್ನದವರೆಗೆ ನನಗೆ ಬಂದಿರುವ ಮಾಹಿತಿ ಪ್ರಕಾರ, ಕಬಿನಿಯಲ್ಲಿ 24,000, ಕೆಆರ್ ಎಸ್ ನಲ್ಲಿ 22,000, ಹೇಮಾವತಿಯಲ್ಲಿ 11,884, ಹಾರಂಗಿಯಲ್ಲಿ 10,430 ಕ್ಯೂಸೆಕ್ ನೀರು ಒಳ ಹರಿವು ಇದೆ. ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಕುಡಿಯುವ ನೀರಿನ ಭದ್ರತೆಗೆ ಜಲಾಶಯಗಳಲ್ಲಿ 40 ಟಿಎಂಸಿ ನೀರು ಉಳಿಸಿಕೊಳ್ಳಬೇಕು. ಅದರಲ್ಲಿ 36 ಟಿಎಂಸಿ ಕುಡಿಯುವ ಉದ್ದೇಶಕ್ಕೆ ಹಾಗೂ 4 ಟಿಎಂಸಿ ಆವಿಯಾಗುತ್ತದೆ" ಎಂದು ವಿವರಿಸಿದರು.

"ಇಂದಿನ ಸಭೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಸಂಸದರು ರಾಜ್ಯದ ಹಿತಕ್ಕಾಗಿ ಅನೇಕ ವಿಭಿನ್ನ ಸಲಹೆಗಳನ್ನು ನೀಡಿದ್ದಾರೆ. ಸಭೆಗೆ ಆಗಮಿಸಿದ್ದ ಎಲ್ಲಾ ನಾಯಕರಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ಕಾನೂನು ತಜ್ಞರು ಸಭೆಯಲ್ಲಿ ಭಾಗಿಯಾಗಿ ಪರಿಸ್ಥಿತಿ ಹಾಗೂ ಮುಂದಿನ ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ" .

"ಸಂಕಟ ಸೂತ್ರದ ವಿಚಾರದಲ್ಲಿ ಕಾನೂನನ್ನು ಗಮನದಲ್ಲಿಟ್ಟು ಕೊಂಡು ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲೂ ಕಾನೂನು ತಜ್ಞರ ಸಲಹೆ ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಆರಂಭಿಕ ಹಂತದಲ್ಲಿದ್ದು, ಮುಂಬರುವ ಜನವರಿ ತಿಂಗಳವರೆಗೂ ಪ್ರತಿ 15 ದಿನಕ್ಕೊಮ್ಮೆ ಕಾವೇರಿ ಸಮಿತಿ ಹಾಗೂ ಪ್ರಾಧಿಕಾರ ಸಭೆ ಮಾಡಲಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕು" ಎಂದರು.

"ಈ ಹಿಂದಿನ ವರ್ಷಗಳಲ್ಲಿ ನಾವು ತಮಿಳುನಾಡಿಗೆ ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಹಾರಿಸಿದ್ದೆವು. ಆದರೆ ಈ ವರ್ಷ 2.9 ಟಿಎಂಸಿ ನೀರು ಬಿಟ್ಟಿದ್ದೇವೆ. ಕಳೆದ ವರ್ಷ ಜುಲೈ ನಲ್ಲಿ 31 ಟಿಎಂಸಿ ನೀರು ಹರಿಸಲಾಗಿತ್ತು. ಈ ವರ್ಷ 0.7 ಟಿಎಂಸಿ ನೀರು ಮಾತ್ರ ಹರಿಸಿದ್ದೇವೆ. ನಾವು ಈ ವರ್ಷ ಈವರೆಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ನಾವು ಹರಿಸಿರುವುದು 3.6 ಟಿಎಂಸಿ ಮಾತ್ರ. ನಾವು ಈ ವರ್ಷ ಜಲಾಶಯಗಳಿಂದ ನೀರು ಬಿಟ್ಟಿಲ್ಲ. ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಅದರ ಸುರಕ್ಷತೆ ಹಿತದೃಷ್ಟಿಯಿಂದ ಅಣೆಕಟ್ಟು ಮೂಲಕ ನೀರು ಹರಿಸಲು ಆದೇಶ ನೀಡಿದ್ದೇವೆ" ಎಂದರು. 

"ಈ ವಿಚಾರದಲ್ಲಿ ಎಲ್ಲಾ ಸಂಸದರು, ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ಆ ನಾಯಕರ ಸಲಹೆಗಳನ್ನು ಕಾನೂನು ಚೌಕಟ್ಟಿನಲ್ಲಿ ತಜ್ಞರು ಹಾಗೂ ಸಚಿವ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

"ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ದೇವರು ಕಳೆದ ಎರಡು ದಿನಗಳಿಂದ ಕೃಪೆ ತೋರಿದ ಪರಿಣಾಮ ಪರಿಸ್ಥಿತಿ ಶಾಂತವಾಗಿದೆ. ರೈತರು, ಕನ್ನಡ ಪರ ಎಲ್ಲಾ ಸಂಘಟನೆಗಳು ಆ. 13ರಂದು ಹಮ್ಮಿಕೊಂಡಿರುವ ಬಂದ್ ಅನ್ನು ಕೈ ಬಿಡಬೇಕು. ಸಂಘಟನೆ ಜೊತೆಗೆ ನಾನು ಹಾಗೂ ಸಚಿವರು ಚರ್ಚೆ ಮಾಡುತ್ತೇವೆ. ಬಂದ್ ಮಾಡುವುದರಿಂದ ಯಾವುದೇ ಪರಿಹಾರ ಸಿಗಲ್ಲ. ಸರ್ಕಾರವೇ ನಿಮ್ಮ ಪರವಾಗಿ ನಿಂತಿರುವಾಗ ಪ್ರತಿಭಟನೆ ಮಾಡುವ ಅಗತ್ಯವಿಲ್ಲ" ಎಂದು ತಿಳಿಸಿದರು.

"ತಮಿಳುನಾಡು ಸಂಕಟ ಸೂತ್ರದ ಬಗ್ಗೆ ಬೇಡಿಕೆ ಇಟ್ಟಿದ್ದು, ಡಿಎಂಕೆ ಖಾಸಗಿಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದನ್ನು ಕಾನೂನು ಚೌಕಟ್ಟಿನಲ್ಲಿ ಉತ್ತರ ನೀಡುತ್ತೇವೆ. ನನ್ನ ಅನುಭವದ ಪ್ರಕಾರ ಇಂತಹ ವಿಚಾರದಲ್ಲಿ ಖಾಸಗಿ ಅರ್ಜಿಗಳಿಗೆ ಮಾನ್ಯತೆ ನೀಡುವುದು ಬಹಳ ಕಡಿಮೆ. ನ್ಯಾಯಾಲಯ ವಿಚಾರದಲ್ಲಿ ಹಿರಿಯರ ಅನುಭವ ಪರಿಗಣಿಸಬೇಕು. ತಮಿಳುನಾಡು ಮುಂದೆ ಯಾವ ಹೆಜ್ಜೆ ಇಡುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ. ಅವರು ಎಷ್ಟು ಕೃಷಿ ಭೂಮಿಗೆ ನೀರು ಬಳಸುತ್ತಾರೆ ಎಂಬುದನ್ನು ಗಮನಿಸುತ್ತೇವೆ" ಎಂದರು.

"ನೀರು ಹಂಚಿಕೆ ವಿಚಾರವಾಗಿ ಸಮಿತಿ ಹಾಗೂ ಪ್ರಾಧಿಕಾರ ನಿರಂತರವಾಗಿ ಮಾಹಿತಿ ಪಡೆದು ಸಭೆ ನಡೆಸಲಿದೆ. ಬರ ಪರಿಸ್ಥಿತಿ ಬಗ್ಗೆ ಪ್ರಧಾನಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ನಾವು ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಹೀಗಾಗಿ ರೈತರು, ಜನ ಪ್ರತಿನಿಧಿಗಳು, ಕಾನೂನು ತಜ್ಞರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯಲಾಗುವುದು" ಎಂದರು.

"ಬರದ ಘೋಷಣೆ ವಿಚಾರವಾಗಿ ನಾವು ಈಗಲೇ ತೀರ್ಮಾನ ಮಾಡಿಲ್ಲ. ಆಗಸ್ಟ್ ಅಂತ್ಯದ ವೇಳೆಗೆ ಮಾಹಿತಿ ಪಡೆದ ಬಳಿಕ ಕಂದಾಯ ಸಚಿವರು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲನೆ ಮಾಡುತ್ತಾರೆ. ನಂತರ ಸಚಿವ ಸಂಪುಟದಲ್ಲಿ ಮಂಡಿಸುತ್ತಾರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ವಾಸ್ತವಾಂಶ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದರು. 

"ವಿರೋಧ ಪಕ್ಷದ ನಾಯಕರು ಬರ ಘೋಷಣೆ ಮಾಡಿ ಎಂದು ಹೇಳುತ್ತಿದ್ದರು. ಅವರು ಕಂದಾಯ ಸಚಿವರಾಗಿ ಅನುಭವ ಹೊಂದಿದ್ದಾರೆ. ಅವರು ರಾಜಕೀಯವಾಗಿ ಮಾತನಾಡಿದಾಗ ನಾವು ತಲೆ ಕೆಡಿಸಿಕೊಳ್ಳಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಸಲಹೆ ನೀಡಿದರೆ ಅದನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ. ಯಾರು ಏನೇ ಸಲಹೆ ಇದ್ದರು ಉಪಮುಖ್ಯಮಂತ್ರಿಗಳ ಬಳಿ ನೀಡಬಹುದು" ಎಂದು ಹೇಳಿದರು.

ಪ್ರಶ್ನೋತ್ತರ:
ಮೇಕೆದಾಟು ವಿಚಾರವಾಗಿ ವಿರೋಧ ಪಕ್ಷದ ನಾಯಕರ ಸಲಹೆಗಳೇನು ಎಂದು ಕೇಳಿದಾಗ, "ಬಸವರಾಜ ಬೊಮ್ಮಯಿ ಅವರು ಈ ವಿಚಾರ ಪ್ರಸ್ತಾಪಿಸಿದರು. ಮೇಕೆದಾಟು ಶಾಶ್ವತ ಪರಿಹಾರವಾಗಿದ್ದು, ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ.  ಕೇಂದ್ರ ಸರ್ಕಾರ ಪ್ರತಿಕ್ರಿಯೆ ಅನುಸಾರ ಯೋಜನೆ ಜಾರಿಗೆ ಮುಂದುವರಿಯಬೇಕು. ಈ ಯೋಜನೆ ಎರಡು ರಾಜ್ಯಗಳಿಗೆ ಅನುಕೂಲವಾಗಲಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉಪಯೋಗವಾಗಲಿದೆ. ಎರಡು ರಾಜ್ಯಗಳು ಕೂತು ಚರ್ಚೆ ಮಾಡಿ, ಬಗೆಹರಿಸಿಕೊಳ್ಳಲು ಸಹಕಾರ ನೀಡುತ್ತೇವೆ ಎಂದಿದ್ದಾರೆ" ಎಂದು ಹೇಳಿದರು.

ಮೇಕೆದಾಟು ಡಿಪಿಆರ್ ನಲ್ಲಿ ತಾಂತ್ರಿಕ ದೋಷ ಇದೆ ಎಂದು ಕೇಳಿದಾಗ, "ಯಾವುದೇ ತಾಂತ್ರಿಕ ದೋಷ ಇಲ್ಲ. ಅವರು ಕೆಲವು ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ. ನಾವು ಬೆಂಗಳೂರಿನ ಕುಡಿಯುವ ನೀರಿಗೆ 6 ಟಿಎಂಸಿ ನೀರು ಮೀಸಲಿಟ್ಟು ಆದೇಶ ಹೊರಡಿಸಿದ್ದೆ, ಅದರ ಬಗ್ಗೆ ಸ್ಪಷ್ಟನೆ ಕೇಳಿದ್ದು, ಅದನ್ನು ನಾವು ಅವರಿಗೆ ತಿಳಿಸುತ್ತೇವೆ" ಎಂದರು.

ನಾಲೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಮಾಡಿದ್ದೀರಾ ಎಂದು ಕೇಳಿದಾಗ, "ಮೊದಲು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿಗೆ ನಮ್ಮ ಆದ್ಯತೆ ಇರುತ್ತದೆ" ಎಂದು ತಿಳಿಸಿದರು. 

ಶನಿವಾರ ಮೈಸೂರಿನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗಲಿದೆಯೇ ಎಂದು ಕೇಳಿದಾಗ, "ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲೂ ನಾವು ಗೌರವಯುತವಾಗಿ ಕಂಡಿದ್ದೇವೆ. ಈ ಹಿಂದೆ ಸರ್ವಪಕ್ಷ ನಿಯೋಗ ಭೇಟಿ ಮಾಡಲು ಆಗಿರಲಿಲ್ಲ. ನಿನ್ನೆ ನಾನು ಪ್ರಧಾನಮಂತ್ರಿಗಳ ಬಳಿ ಸಮಯ ಕೇಳಿದೆ. ಅವರು ಸಮಯ ನೋಡುವುದಾಗಿ ಹೇಳಿದ್ದಾರೆ. ಸಂಸತ್ ಅಧಿವೇಶನ ಮುಕ್ತಾಯವಾಗಲಿ. ಕಾದು ನೋಡೋಣ" ಎಂದರು. 

ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂಬ ಆ ರಾಜ್ಯದ ಕಾನೂನು ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, "ತಮಿಳುನಾಡಿನ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ, ನನಗೆ ತಮಿಳುನಾಡು ನಾಡು ಒಂದು, ಕರ್ನಾಟಕ ಒಂದು, ಎರಡೂ ರಾಜ್ಯಗಳು ಒಂದು ಎಂಬ ಭಾವನೆ ಇದೆ. ಮೇಕೆದಾಟು ಯೋಜನೆ 90% ತಮಿಳುನಾಡಿಗೆ ಲಾಭ. ಯಾವುದೇ ಕಾರಣಕ್ಕೆ ಮೇಕೆದಾಟುವಿನಿಂದ ನೀರನ್ನು ಹಿಂದಕ್ಕೆ ತೆಗೆದುಕೊಂಡು ಬರಲು ಸಾಧ್ಯವಿಲ್ಲ. ತಮಿಳುನಾಡು ಸಿಎಂ ಯುವಕರು, ರಾಜಕೀಯದಲ್ಲಿ ಹೊಸಬರಾದರೂ ಅವರು ಪ್ರಬುದ್ಧ ನಾಯಕ. ಅವರು ವಾಸ್ತವ ಪರಿಸ್ಥಿತಿ ಅರಿಯುತ್ತಾರೆ ಎಂಬ ವಿಶ್ವಾಸವಿದೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲು ಮುಂದಾಗಿದ್ದಕ್ಕೆ ಅವರಿಗೆ ಅಭಿನಂದಿಸುವೆ" ಎಂದು ತಿಳಿಸಿದರು.

"ಕಾವೇರಿ ವಿಚಾರವಾಗಿ ಪರಿಸ್ಥಿತಿ ಬಿಗುವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮನವಿಯಂತೆ ತಮಿಳುನಾಡು ಸಿಎಂ ವಿಜಯ್ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮುಂದೂಡಲು ಒಪ್ಪಿದ್ದಾರೆ. ಅವರು ಇಲ್ಲಿಗೆ ಬಂದಾಗ ಅವರ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ. ನಾವು ಪರಸ್ಪರ ಗೌರವಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅಂತಿಮವಾಗಿ ನಾವೆಲ್ಲರೂ ಭಾರತೀಯರು, ಒಟ್ಟಾಗಿ ಕೆಲಸ ಮಾಡಬೇಕು. ನಾವು ತಮಿಳುನಾಡು ನಡೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾವು ನೆಲದ ಕಾನೂನು ಹಾಗೂ ಆದೇಶ ಪಾಲನೆ ಮಾಡುತ್ತಿದ್ದೇವೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸವಿದೆ" ಎಂದರು

ತಮಿಳುನಾಡು ಸಿಎಂ ಜೊತೆ ಸಭೆ ಯಾವಾಗ ಎಂದು ಕೇಳಿದಾಗ, "ನಾನು ಈ ಸಭೆಯನ್ನು ಕದ್ದುಮುಚ್ಚಿ ಮಾಡುವುದಿಲ್ಲ. ನಿಮಗೆ ಮಾಹಿತಿ ನೀಡುತ್ತೇವೆ" ಎಂದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ