ಬೆಳಗಾವಿ: ಪ್ರಯತ್ನ ಇಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಜಿಎ ಪ್ರೌಢಶಾಲೆಯ ಉಪ ಪ್ರಾಚಾರ್ಯ ಸಿ.ಪಿ.ದೇವರುಷಿ ಹೇಳಿದರು. ನಗರದ ಜಿಎ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಗ್ಗೆ ಪ್ರಸಿದ್ಧ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದ ಅವರು, ಪುಂಡಲೀಕನಿಗೆ ಪಾಂಡುರಂಗ ವಿಠಲ ಒಲಿದ ಬಗೆಯನ್ನು ಸುಂದರವಾಗಿ ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಓದಿನ ಅವಧಿಯಲ್ಲಿ ಮಹಾಸಾಧನೆ ಮಾಡಬೇಕು. ಈ ಮೂಲಕ ಜೀವನದಲ್ಲಿ ಉತ್ತುಂಗಕ್ಕೆ ಏರಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಶಿಕ್ಷಕರ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಜೀವನವಿಡೀ ತಾವು ಕಲಿತ ಶಿಕ್ಷಕರನ್ನು ಗೌರವಿಸುವ ಮೂಲಕ ಅವರಿಗೆ ನೀಡಬೇಕಾದ ಮನ್ನಣೆ ಕೊಡಬೇಕು ಎಂದು ವಿವಿಧ ಶಿಕ್ಷಕರು ಕಿವಿಮಾತು ಹೇಳಿದರು.
ಶಿಕ್ಷಕರಾದ ಎ.ಆರ್. ಪಾಟೀಲ, ಸಿ.ಎಂ.ಪಾಗಾದ, ಎಚ್.ಜಿ. ವೀರಗಂಟಿ,ಆರ್ ಎಸ್ ಮುಳಕೂರ ಉಪಸ್ಥಿತರಿದ್ದರು. 10ನೇ ತರಗತಿ ವಿದ್ಯಾರ್ಥಿಗಳು ಸಮೂಹ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಶೀತಲ ಕುರುಬರ ಮತ್ತು ಸೃಷ್ಟಿ ಅಗಸಗಿ ಭಾಷಣ ಮಾಡಿದರು. 10ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಜನಾ ಗುಡ್ಡಕಾಯು ಮತ್ತು ಸೃಷ್ಟಿ ಉಪರಿ ನಿರೂಪಿಸಿದರು. ಸುಶ್ಮಿತಾ ಬೆಡಸೂರ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಆದಿತ್ಯ ತೇವರೆ ಕಾರ್ಯಕ್ರಮ ಸಂಘಟಿಸಿದ್ದರು.