ಈ ನಾಡು ಕಂಡ ಮಹಾದಾನಿಗಳಲ್ಲಿ ಬಹು ಎತ್ತರದ ಸ್ಥಾನ ಸಂಪಾದಿಸಿದವರು ರಾಜಾ ಲಖಮಗೌಡರು. ವೀರಶೈವ ಪುಣ್ಯಪುರುಷರಲ್ಲಿ ಇವರು ಒಬ್ಬರು. ಶಿಕ್ಷಣ ಮತ್ತು ಧರ್ಮ, ಸಮಾಜದ ಪ್ರೀತಿ ಅವರಲ್ಲಿ ಅನನ್ಯವಾಗಿತ್ತು. ಅವರ ಉದಾತ್ತ ವಿಚಾರಗಳು ಹಾಗೂ ಕೊಡುಗೆಗಳು ಸಮಾಜಕ್ಕೆ ಫಲಪ್ರದವಾಗಿದ್ದವು. ಧರ್ಮ ಭಾಷೆ ಜಾತಿ ಆಚೆ ನಿಂತು ಚಿಂತನೆ ಮಾಡುತ್ತಿದ ಮಹಾ ಮಾನವತಾವಾದಿ ರಾಜಾ ಲಖಮಗೌಡರು. ಹಿಡಕಲ್ ಜಲಾಶಯ ಸ್ಥಾಪಿಸುವುದರ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತವರು. ಅಂದಿನ ವೀರಶೈವ ಸಮಾಜದ ಕಂಡ ಪ್ರಪ್ರಥಮ ಬಾರ್ -ಅಟ್ -ಲಾ ಪದವೀಧರಾದವರು. ಲಖಮಗೌಡರು ನಾಡಿನ ಹಾಗೂ ರಾಷ್ಟ್ರದ ತುಂಬಾ ಅನೇಕ ಸಂಘ ಸಂಸ್ಥೆಗಳಿಗೆ ಉದಾರವಾಗಿ ದಾನ ನೀಡಿ ಸಾವಿರದ ದೊರೆ ಎನಿಸಿದವರು. ನಾಡಿನ ಅನೇಕ ಸಂಸ್ಥಾನಗಳು ಸಂಸ್ಥಾನಿಕರು ವಾಡೆಗಳು ಅಳಿದ ಮೇಲು ಉಳಿದವರು. ಇದಕ್ಕೆ ಕಾರಣ ಅವರ ಸರಳ ಸಜ್ಜನಿಕೆ ಜೀವನದ ವೈಖರಿಯಾಯಿತ್ತು. ಲಖಮಗೌಡರು ವಂಟಮೂರಿ ಸಂಸ್ಥಾನದ ಕೀರ್ತಿಪತಾಕೆ ಹಾರಿಸಿದವರು. ಅವರ ಹೆಸರು ಸೂರ್ಯ ಚಂದ್ರ ಇರುವವರಿಗೆ ರಾರಾಜಿಸುತ್ತಿರುತ್ತದೆ. ಲಖಮಗೌಡರು ಜೀವನವೇ ಸಮಾಜಕ್ಕೊಂದು ಅಧ್ಯಾಯವಾಗಿದೆ. ಅವರು ರೈತ ಕುಟುಂಬದಲ್ಲಿ ಜನಿಸಿ ಸಂಸ್ಥಾಧಿಕರಾದದ್ದು ಅವರ ಜೀವನದ ಬಹು ದೊಡ್ಡ ತಿರುವುವಾಗಿತ್ತು. ಈ ಪ್ರಪಂಚದಲ್ಲಿ ಅನೇಕ ಜನ ಹುಟ್ಟುತ್ತಾರೆ ಅನೇಕ ಜನ ಸಾಯುತ್ತಾರೆ ಆದರೆ ಜನನ ಮರಣದ ಮಧ್ಯದಲ್ಲಿಸಾಧನೆ ಮಾಡಿ ದೇದಿಪ್ಯಮಾನವಾಗಿ ಪ್ರಜ್ವಲಿಸಿದವರು ರಾಜಾ ಲಖಮಗೌಡರು.
ಸಮಾಜದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು,ಪೂಜೆಗೆ ಯೋಗ್ಯನಾದವನು .ಸಮಾಜದ ಉನ್ನತಿ ಹಾಗೂ ಶಿಕ್ಷಣ ಪ್ರಚಾರಕ್ಕಾಗಿ ತ್ಯಾಗ ಮನೋಭಾವನೆಯಿಂದ ದುಡಿದವರು. ಯಾವ ಭೌತಿಕ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಸ್ಪೂರ್ತಿಯಿಂದ ತನ್ನ ಆಸ್ತಿ ಮತ್ತು ಸಂಪಾದನೆಯ ಬಹುಭಾಗವನ್ನು ದಾನ ನೀಡಿದವರನ್ನು ಮಹಾ ದಾನಿಗಳೆಂದು ರಾಜಾ ಲಖಮ ಗೌಡರನ್ನು ಕರೆಯಬಹುದು.
ಅಂದಿನ ಉತ್ತರ ಕರ್ನಾಟಕ ಸಾಂಸ್ಕೃತಿಕವಾಗಿಯೂ ತೀರ ಹಿಂದುಳಿದ ಸಂದರ್ಭದಲ್ಲಿ ಅದರ ಸುತ್ತ ಮುತ್ತಲಿನ ಪ್ರಗತಿಗಾಗಿ ಹಗಲಿರುಳು ಹಂಬಲಿಸಿ ಹಲವಾರು ಉಪಯುಕ್ತ ಯೋಜನೆಗಳನ್ನು ಕೈಗೊಂಡು ತಮ್ಮನ್ನು ತಮ್ಮ ಸಂಸ್ಥಾನ ಸರ್ವಸ್ವವನ್ನು ಸಮಾಜ ಹಾಗೂ ಶಿಕ್ಷಣಕ್ಕೆ ಸಮರ್ಪಿಸಿದ ಪ್ರಾತಃ ಸ್ಮರಣೀಯರಾದ ರಾಜಾ ಲಖಮಗೌಡರು.
ವಂಟಮೂರಿ ಸಂಸ್ಥಾನದ ಕಳಶಪ್ರಾಯವಾದ ರಾಜಾ ಲಖಮ ಗೌಡರು 19ನೆಯ ದೊರೆಗಳಾದ ಸರದಾರ ರಾಜಾ ಲಖಮಗೌಡರು ಹುಕ್ಕೇರಿ ತಾಲೂಕಿನ ಅಮ್ಮಣಗಿ ಗೌಡರ ಮನೆತನದ ಸಾತ್ವಿಕ ದಂಪತಿಗಳಾದ ಅಲಗೌಡ ಮತ್ತು ಕೃಷ್ಣಾಬಾಯಿ ಉದರದಿಂದ ಕ್ರಿ ಶ.1864 ಜುಲೈ 29 ರಂದು ಜನಿಸಿದರು. ತಂದೆ ತಾಯಿಗಳು ಇಟ್ಟ ಹೆಸರು ಅಪ್ಪಾಸಾಹೇಬ ಎಂದು ಕರೆಯುತ್ತಿದ್ದರು. ಮುಂದೆ ಅಪ್ಪಾಸಾಹೇಬನೇ ರಾಜಾ ಲಖಮಗೌಡರಾದರು.ಅದೊಂದು ದಿನ ಅಮೃತ ಘಳಿಗೆ ಯಾದದ್ದು.
ಅಪ್ಪಾಸಾಹೇಬ ಪ್ರಾಥಮಿಕ ಶಿಕ್ಷಣವನ್ನು ಅಮ್ಮಣಗಿನಲ್ಲಿ ಪೂರೈಸಿದರು . ತದನಂತರ ಕೊಲ್ಲಾಪುರ ಮತ್ತು ಬೆಳಗಾವಿ ಸರದಾರ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಲಖಮ ಗೌಡರು ಪಡೆದರು. ಕ್ರಿ ಶ.1883ರಲ್ಲಿ ಮ್ಯಾಟ್ರಿಕ್ ಪಾಸಾದರು.ಉನ್ನತ ಶಿಕ್ಷಣ ಪಡೆಯುವ ಅಭಿಪ್ಸೆಯಿಂದ ಇಂಗ್ಲೆಂಡಿಗೆ ಹೋಗಿ 'ಬ್ಯಾರಿಸ್ಟರ್ ಆಪ್ ಲಾ ಪದವಿ' ಪಡೆಯಲು ದೃಢಸಂಕಲ್ಪ ಮಾಡಿ ಕಾಯ್ದೆ ಕಾನೂನು ಜ್ಞಾನದ ದಿಗ್ಗಜರಾದ ಸಿಲ್ವೆಸ್ಟರ್ ಮತ್ತು ಲೀ ಇವರ ನೇತೃತ್ವದಲ್ಲಿ ಉತ್ತಮ ಜ್ಞಾನ ಪಡೆದರು.ಕ್ರಿ ಶ 1888ರಲ್ಲಿ ಬಾರ್ ಅಟ್ ಲಾ ಪರೀಕ್ಷೆ ಪಾಸಾದರು.ವೀರಶೈವ ಸಮಾಜದಲ್ಲಿ ಪ್ರಥಮವಾಗಿ ಪಾಸಾದ ಕೀರ್ತಿಗೆ ಪಾತ್ರರಾದವರು.ಲಖಮಗೌಡರನ್ನು ಬ್ರಿಟಿಷ್ ಸರ್ಕಾರವು ಪ್ರಥಮ ದರ್ಜೆ ಯ ನ್ಯಾಯಾಧೀಶರನ್ನಾಗಿ ನೇಮಿಸಿತು.
ರಾಜಾ ಲಖಮಗೌಡರು ಸಾಮಾಜಿಕ ಕಳಕಳಿ ಮತ್ತು ಶೈಕ್ಷಣಿಕ ಚಿಂತನೆಗೆ ಶ್ರಮಿಸಿ ಕೆ ಎಲ್ ಇ ಸಂಸ್ಥೆಗೆ 1928ರ ಸುಮಾರಿಗೆ 20000 ರೂಂ ದೇಣಿಗೆ ನೀಡಿ ಸಂಸ್ಥೆಗೆ ಶಕ್ತಿಯಾದರು. ಕೆಎಲ್ಇ ಸಂಸ್ಥೆ ಪ್ರತ್ಯೇಕ ವಿಜ್ಞಾನ ಮಹಾವಿದ್ಯಾಲಯ ಸ್ಥಾಪಿಸಲು 50,000 ರೂ ಕೊಡುಗೆ ನೀಡಿದರು .ಧಾರವಾಡದಲ್ಲಿರುವ ಕೆ ಎಲ್ ಇ ಅಸೋಸಿಯೇಷಗೆ (ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ) 55,000 ರೂ ದೇಣಿಗೆ ನೀಡಿದರು. ವಂಟಮೂರಿಯಲ್ಲಿ ಆಯುರ್ವೇದ ದವಾಖಾನೆ ,ಕೆ ಎಲ್ ಇ ಇಂಗ್ಲೀಷ್ ಮಾಧ್ಯಮ ಶಾಲೆ ಸ್ಥಾಪಿಸಿದರು. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ಬಾದಾಮಿ ಶಿವಯೋಗ ಮಂದಿರ ವಿದ್ಯಾಪೀಠಕ್ಕೆ ಹಾರ್ದಿಕ ಸಹಾಯ ನೀಡಿ ಪ್ರೇರಣೆ ಕೊಟ್ಟರು.ಸರ್ವಧರ್ಮದ ಮಠ ಮಾನ್ಯ ಮಂದಿರಗಳನ್ನು ನಿರ್ಮಾಣ ಮಾಡಿದವರು. ಸಾಂಸ್ಕೃತಿಕ ಭವನಗಳನ್ನು ನಿರ್ಮಿಸಿದರು. ರೈತರಿಗಾಗಿ ಕೆರೆ ಬಾವಿ ಹಾಗೂ ಕಾಲುವೆ ನಿರ್ಮಿಸಿದವರು. ಹಿಂದೂ ಮತ್ತು ಇತರ ಧರ್ಮಗಳ ಹಬ್ಬ, ಜಾತ್ರೆ, ಉತ್ಸವಗಳನ್ನು ವೈಭವದಿಂದ ಆಚರಿಸುತ್ತಿದ್ದರು . ಲಖಮಗೌಡರು ಪಂಢರಪುರ ವಿಠಲನ ಪರಮ ಭಕ್ತರಾಗಿದ್ದರು. ಪರಿಸರ ಪ್ರೇಮಿಗಳು ಕೂಡ ಆಗಿದ್ದರು. ನಿರ್ಗಮಿಯಿಂದ ಕೂಡಿದ ಸಹನಾಮೂರ್ತಿಗಳಾಗಿದ್ದರು. ರಾಜಾ ಲಖಮಗೌಡರು ಕನ್ನಡ ಭಾಷೆ ಮತ್ತು ಸಾಹಿತ್ಯಾಭಿಮಾನಿಗಳಾಗಿದ್ದರು. ಇದರ ಜೊತೆಗೆ ಸಂಗೀತಾಭಿರುಚಿ ಹೊಂದಿದವರು.ಸಂಸ್ಥಾನದಲ್ಲಿ ಬರುವ ರೈತರ ಮತ್ತು ಸಾಮಾನ್ಯ ಜನರ ವ್ಯಾಜ್ಯಗಳನ್ನು ಪರಿಹರಿಸುತ್ತಿದರು. ತಮ್ಮ ವಾಡೆಯಲ್ಲಿ ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು.ಬೆಳಗಾವಿಯಲ್ಲಿ ಸೋಶಿಯಲ್ ಕ್ಲಬ್ ಸ್ಥಾಪಿಸಲು 6,000 ರೂ ನೀಡಿದರು. ಬೆಳಗಾವಿಯ ಯೂನಿಯನ್ ಜಿಮ್ ಖಾನಾದ ಸಕ್ರಿಯ ಸದಸ್ಯರಾಗಿದ್ದರು.ಅವರು ಬೆಳಗಾವಿಯ ಮಾರುತಿ ಬೀದಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಧನ ಸಹಾಯ ಒದಗಿಸಿದರು .ಪುಣೆಯ ಡೆಕ್ಕನ್ ಎಜುಕೇಶನ್ ಸೊಸೈಟಿಗೆ ದಾನ ನೀಡಿದರು. ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜು, ದಿಲ್ಲಿಯ ಲೇಡಿ ಐರ್ ವಿನ್ ಕಾಲೇಜು, ಕೊಲ್ಲಾಪುರದ ಲಿಂಗಾಯತ ಪ್ರೀ ಬೋರ್ಡಿಂಗ್, ಧಾರವಾಡದ ಕರ್ನಾಟಕ ಕಾಲೇಜು, ಬೆಳಗಾವಿಯ ವನಿತಾ ವಿದ್ಯಾಲಯ, ಮರಾಠ ಮಂಡಳಗಳಿಗೂ ದಾನ ನೀಡಿದರು. ಚಿಕ್ಕೋಡಿಯ ಆರ್ ಡಿ ಹೈಸ್ಕೂಲು ಭವ್ಯ ಕಟ್ಟಡ ನಿರ್ಮಿಸಲು ಭೂದಾನ ಮಾಡಿದರು.
ಬೆಳಗಾವಿಯ ಆಯುರ್ವೇದ ಕಾಲೇಜಿಗೆ, ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಯಂತ್ರ ಗಳನ್ನು ಖರೀದಿಸಲಿಕ್ಕೆ ಧನ ಸಹಾಯ ಮಾಡಿದರು. ಘಟಪ್ರಭೆಯ ಕರ್ನಾಟಕ ಆರೋಗ್ಯ ಧಾಮ, ಮಿರಜದ ಮಿಶನ್ ದವಾಖಾನೆಗೆ ದೇಣಿಗೆ ಸಲ್ಲಿಸಿದರು. ಬೆಳಗಾವಿಯಲ್ಲಿ ಪ್ರಾರಂಭವಾದ ಕರ್ನಾಟಕ ಲಾ ಸೊಸೈಟಿಗೆ ಅಂದಿನ ಸಮಯದಲ್ಲಿ ಒಂದು ಲಕ್ಷ ರೂಪಾಯಿ ಧನ ಸಹಾಯ ಒದಗಿಸಿದರು.ಇಂಥ ಮಹಾದಾನಿಯನ್ನು 1908ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷರನ್ನಾಗಿಸಲಾಯಿತು . ಬ್ರಿಟಿಷ್ ಸರಕಾರವು ಅವರಿಗೆ "ರಾಜಾ" ಎಂಬ ಪದವಿ ನೀಡಿ ಗೌರವಿಸಿತು. ಅದರ ಜೊತೆಗೆ "ಸರದಾರ "ಪದವಿ ಸಹ ನೀಡಲಾಯಿತು . ಅವರ ವ್ಯಕ್ತಿತ್ವಕ್ಕೆ ಕಳಶಪ್ರಾಯದಂತೆ ಕಂಗೊಳಿಸಿದವು.ಅವರು ಕೆ ಎಲ್ ಇ ಸಂಸ್ಥೆಗೆ ಎರಡನೇ ಬಾರಿ ಅಧ್ಯಕ್ಷರಾಗಿ 1928 ರಿಂದ 1943ರ ವರೆಗೆ ಸೇವೆ ಸಲ್ಲಿಸಿದರು. ಇವರ ಸೇವೆ ಹಾಗೂ ಉದಾರ ಕೊಡುಗೆ ಸ್ಮರಿಸಿ ಕೆ ಎಲ್ ಎ ಸಂಸ್ಥೆಯು ಧಾರವಾಡದ ಒಂದು ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಬೆಳಗಾವಿ ಪದವಿ ವಿಜ್ಞಾನ ಮಹಾವಿದ್ಯಾಲಯಕ್ಕೆ ಇವರ ನಾಮಕರಣ ಮಾಡಲಾಗಿದೆ.
ಕೊಡುಗೈದಾನಿಗಳಾದ ರಾಜಾ ಲಖಮಗೌಡರು 79 ವರ್ಷಗಳ ಸುದೀರ್ಘ ಫಲಪ್ರದ ಜೀವನ ಸಾಗಿಸಿ ಬದುಕಿನ ಆಯುಷ್ಯವೆಲ್ಲ ಧರ್ಮ,ಸಮಾಜ ಹಾಗೂ ಶೈಕ್ಷಣಿಕಕ್ಕೆ ಮೀಸಲಿಟ್ಟವರು.
ಪರೋಪಕಾರಂ ಇದಂ ಶರೀರಂ ಈ ತತ್ವದ ಅಡಿಯಲ್ಲಿ ಜೀವನ ಸಾಗಿಸಿದ ಪ್ರಾತಃಸ್ಮರಣಿರಾದ ರಾಜಾ ಲಖಮಗೌಡರು ಲಿಂಗದಲ್ಲಿ ಲೀನವಾದರು.
(2027 ಜುಲೈ 29ರಂದು ಮಹಾದಾನಿ ರಾಜಾ ಲಖಮಗೌಡರ 163 ನೆಯ ಜಯಂತಿ ಉತ್ಸವವನ್ನು ಕೆ ಎಲ್ ಇ ಸಂಸ್ಥೆಯ ಅಂಗಸಂಸ್ಥೆಯಾದ
ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ
ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಬೆಳಿಗ್ಗೆ 10:30 ಗಂಟೆಗೆಆಚರಿಸಲಾಗುವುದು)
ಲೇಖಕರು:
ಪ್ರೊ.ಶಶಿಕಾಂತ ಬ ತಾರದಾಳೆ
ಕನ್ನಡ ಅಧ್ಯಾಪಕರು
ಕೆ ಎಲ್ ಇ ಸಂಸ್ಥೆಯ
ರಾಜಾ ಲಖಮಗೌಡ ವಿಜ್ಞಾನ.
ಸ್ವಾಯತ್ತ ಮಹಾವಿದ್ಯಾಲಯ,
ಬೆಳಗಾವಿ
9945912291