ಮುಂಬೈ: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ ನೇತೃತ್ವದ ಆಯ್ಕೆ ಸಮಿತಿಯು ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಎರಡೂ ಸರಣಿಗಳಲ್ಲಿ ನಾಯಕತ್ವದ ದೊಡ್ಡ ಜವಾಬ್ದಾರಿ ನೀಡಿದೆ. ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು ತಂಡದ ಆಯ್ಕೆಯಲ್ಲಿ ಎದ್ದು ಕಾಣುತ್ತದೆ.
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆಯಾದರೂ, ಅವರ ಆಟವು ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡುವುದರ ಮೇಲೆ ನಿರ್ಧಾರಿತವಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜಿರ ಅಗರ್ಕರ ಈ ಇಬ್ಬರೂ ಆಟಗಾರರು ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೂ ಶ್ರೇಯಸ್ ಅಯ್ಯರ್ ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ.
ಹಿರಿಯ ಆಟಗಾರ ವಿರಾಟ್ ಕೊಹ್ಲಿ ಈ ಸರಣಿಗೆ ಆಯ್ಕೆಯಾಗಿದ್ದಾರೆ. ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಸರಣಿಯ 15 ಸದಸ್ಯರ ತಂಡದಲ್ಲಿ ಗುರುನೂರ್ ಬ್ರಾರ್, ಪ್ರಿನ್ಸ್ ಯಾದವ್ ಮತ್ತು ಹರ್ಷ ದುಬೆ ಅವರಂತಹ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಟೆಸ್ಟ್: ಪಂತ್ ಬದಲಿಗೆ ರಾಹುಲ್ ಉಪನಾಯಕ; ಜಡೇಜಾಗೆ ವಿಶ್ರಾಂತಿ
ಜೂನ್ 6 ರಿಂದ ಮುಲ್ಲನ್‌ಪುರದಲ್ಲಿ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೂ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್ ತಂಡವನ್ನೂ ಸಹ ಶುಭಮನ್ ಗಿಲ್ ಅವರೇ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಬದಲಿಗೆ ಕೆ.ಎಲ್. ರಾಹುಲ್ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ ಈ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಐಪಿಎಲ್‌ನ ಗುಜರಾತ್ ಟೈಟನ್ಸ್ ತಂಡದ ಸಹ ಆಟಗಾರರಾದ ಸ್ಪಿನ್ ಬೌಲರ್ ಮಾನವ ಸುತಾರ್ ಮತ್ತು ವೇಗಿ ಗುರುನೂರ್ ಬ್ರಾರ್ ಟೆಸ್ಟ್ ತಂಡಕ್ಕೆ ಿದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಭಾರತದಲ್ಲಿ ನಡೆಯಲಿರುವ ಈ ತವರು ಸರಣಿಯು ಜೂನ್ ಮೊದಲ ವಾರದಿಂದ ಆರಂಭವಾಗಲಿದೆ.
ಟೆಸ್ಟ್ ಪಂದ್ಯ: ಜೂನ್ 6 ರಿಂದ (ಸ್ಥಳ: ಮುಲ್ಲನ್‌ಪುರ) ಹಾಗೂ ಮೂರು ಏಕದಿನ ಪಂದ್ಯಗಳು: ಜೂನ್ 14 ರಿಂದ ಆರಂಭ (ಸ್ಥಳಗಳು: ಧರ್ಮಶಾಲಾ, ಲಕ್ನೋ, ಮತ್ತು ಚೆನ್ನೈ)
ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ), ಸಾಯಿ ಸುದರ್ಶನ, ರಿಷಭ್ ಪಂತ್, ದೇವದತ್ತ ಪಡಿಕ್ಕಲ್, ನಿತೀಶಕುಮಾರ ರೆಡ್ಡಿ, ವಾಷಿಂಗ್ಟನ್ ಸುಂದರ, ಕುಲದೀಪ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ ಸುತಾರ್, ಗುರುನೂರ್ ಬ್ರಾರ್, ಹರ್ಷ ದುಬೆ, ಧ್ರುವ ಜುರೆಲ್.
ಭಾರತ ಏಕದಿನ (ODI) ಪಂದ್ಯಗಳಿಗೆ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶಕುಮಾರ ರೆಡ್ಡಿ, ವಾಷಿಂಗ್ಟನ್ ಸುಂದರ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಕುಲದೀಪ ಯಾದವ್, ಗುರುನೂರ್ ಬ್ರಾರ್, ಹರ್ಷ್ ದುಬೆ.
