ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ದೆಹಲಿಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.
ಸ್ವಾತಂತ್ರೋತ್ಸವದ ದಿನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ದೆಹಲಿ ಆಗಸದಲ್ಲಿ ಹಾರಾಡುವ ಹಿನ್ನೆಲೆ ಅವುಗಳಿಗೆ ತೊಂದರೆ ನೀಡದಂತೆ ಗಿಡುಗ, ಹದ್ದುಗಳಂತಹ ಪಕ್ಷಿಗಳನ್ನು ಭೂಮಿಯತ್ತ ಸೆಳೆಯಲು ಕೆಂಪುಕೋಟೆಯ ಸುತ್ತಮುತ್ತ ಪಕ್ಷಿಗಳಿಗೆ ಕೋಳಿ ಮಾಂಸವನ್ನು ಆಹಾರವಾಗಿ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 4 ಫೀಡಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಮಾನಿಕ ಪ್ರದರ್ಶನದ ವೇಳೆ ಹದ್ದು, ಗಿಡುಗದಂತಹ ದೊಡ್ಡ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸುವುದನ್ನು ತಡೆಯಲು ಈ ನಿರ್ಧಾರ ಮಾಡಲಾಗಿದೆ. ವೈಮಾನಿಕ ಪ್ರದರ್ಶನ ಆಯೋಜಿಸುವ ವಾಯುಪಡೆ ಸಹಯೋಗದೊಂದಿಗೆ ಪಕ್ಷಿಗಳಿಗೆ ಮಾಂಸಾಹಾರ ಉಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತಮುತ್ತ ಹಾಗೂ ವಿಮಾನಗಳ ಹಾರಾಟದ ಮಾರ್ಗದಲ್ಲಿ, ಪಕ್ಷಿಗಳಿಗೆ ಆಹಾರ ನೀಡುವ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ಅನುಮೋದನೆ ದೊರೆತಿದೆ. ಚಟುವಟಿಕೆ ಈಗಾಗಲೇ ಆರಂಭವಾಗಿದ್ದು, ಗುರುತಿಸಲಾದ ಸ್ಥಳಗಳಲ್ಲಿ ಕೋಳಿ ಮಾಂಸ ಇಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದಂದು ನಡೆಯುವ ವೈಮಾನಿಕ ಚಟುವಟಿಕೆ ವೇಳೆ ಗಿಡುಗ, ಹದ್ದು ಮುಂತಾದ ಪಕ್ಷಿಗಳನ್ನು ಆಕರ್ಷಿಸಿ, ವಿಮಾನಗಳ ಹಾರಾಟದ ಮಾರ್ಗದಿಂದ ದೂರವಿರಿಸುವ ಉದ್ದೇಶದಿಂದ ನಿಗದಿತ ಸ್ಥಳಗಳಲ್ಲಿ ಮಾಂಸದ ತುಂಡುಗಳನ್ನು ಹಾಕಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಗಿಡುಗ, ಹದ್ದುಗಳಂತಹ ಪಕ್ಷಿಗಳು ಬಯಲು ಪ್ರದೇಶದಲ್ಲಿ ಸಿಗುವ ಆಹಾರಕ್ಕೆ ಆಕರ್ಷಿತವಾಗುತ್ತವೆ. ವಿಮಾನ ಹಾರಾಟದ ಸಮಯದಲ್ಲಿ ಅವುಗಳು ಅಡ್ಡಬಂದರೆ ಡಿಕ್ಕಿ ಸಂಭವಿಸುವ ಅಪಾಯವಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪಕ್ಷಿಗಳ ಸಂಚಾರ ಮತ್ತು ವಿಮಾನಗಳ ಹಾರಾಟದ ಮಾರ್ಗಕ್ಕೆ ಇರುವ ಸಾಮೀಪ್ಯದ ಆಧಾರದ ಮೇಲೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.