ಬೆಳಗಾವಿ : ವಿದ್ಯಾರ್ಥಿಗಳ ಭೌತಿಕ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆ ಉತ್ತಮವಾದ ಮಾರ್ಗ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ಶನಿವಾರದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕ ಜೊತೆಗೆ ಮಾನಸಿಕವಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿಯೂ ಏಕಾಗ್ರತೆ ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರೀಡಾ ಕೌಶಲ್ಯಗಳಿಗೆ ಇದು ಉತ್ತಮ ವೇದಿಕೆಯಾಗಲಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು.
ಆಟಗಾರರು ಮೈದಾನದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿ. ಸೋಲು ಗೆಲುವು ಎರಡೂ ಸಾಮಾನ್ಯ. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧರಿರಬೇಕು. ನಿಜವಾದ ಕ್ರೀಡಾಪಟು ಗೆಲುವಿಗಿಂತ ಹೆಚ್ಚಾಗಿ ಕ್ರೀಡಾಸ್ಫೂರ್ತಿಯನ್ನು ತೋರಿಸುತ್ತಾನೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಅವರು ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ. ಕ್ರೀಡೆಯಿಂದ ಮನುಷ್ಯನು ಉಲ್ಲಾಸದಿಂದ ಇರಬಹುದು. ಹಾಗೂ ಸಮಯಪಾಲನೆಯನ್ನು ಕಲಿಸುತ್ತದೆ. ನಮ್ಮ ಮಹಾವಿದ್ಯಾಲಯವು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಗಮನ ಕೊಡುತ್ತಿದೆ ಎಂದರು.
ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ, ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಜಗದೀಶ ಗಸ್ತಿ ಉಪಸ್ಥಿತರಿದ್ದರು.
ಕ್ರೀಡಾ ಕೂಟದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಥಮ, ಕಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ, ನಿರ್ವಹಣಾ ಶಾಸ್ತ್ರ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.
ಯುನಿವರ್ಸಿಟಿ ಬ್ಲೂ ಆದ ಮಹಾವಿದ್ಯಾಲಯದ ವಿದ್ಯಾರ್ಥಿಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ವಿದ್ಯಾರ್ಥಿನಿ ನೇತ್ರಾ ಜವೆಜರ್ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು. ಡಾ. ಗಿರಿಜಾಶಂಕರ ಮಾನೆ ವಂದಿಸಿದರು. ಉಪನ್ಯಾಸಕ ಲಿಯಾಕತ್ ಅತ್ತರ್ ಪಥಸಂಚಲನದ ವೀಕ್ಷಕ ವಿವರಣೆ ಮಾಡಿದರು, ಮಹಾವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ಕರುಣಾ ಅಮೃಸ್ಕರ್ ಸ್ವಾಗತಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.