ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಸಂವಿಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಅದರ ಪಾತ್ರವನ್ನು ಸಾರುವ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾರತೀಯ ಸಂವಿಧಾನದ ರಚನೆ, ಅದರ ಪ್ರಮುಖ ಅಂಶಗಳು ಹಾಗೂ ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿಗಳ ಕುರಿತು ವಿವರಿಸಿದರು. ಸಂವಿಧಾನ ರಚನೆಗೆ 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾದವು ಎಂದು ತಿಳಿಸಿದ ಅವರು, ಸಂವಿಧಾನ ದಿನವು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಷ್ಟೇ ಮಹತ್ವವನ್ನು ಹೊಂದಿದೆ ಎಂದು ಹೇಳಿದರು.
ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಹಾಗೂ ನ್ಯಾಯವಾದಿ ವಿವೇಕ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂವಿಧಾನ ದೇಶದ ಸರ್ವೋಚ್ಚ ಕಾನೂನಾಗಿದ್ದು, ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳನ್ನು ಒದಗಿಸಿದೆ. ಅವುಗಳ ಅರಿವು ಹೊಂದುವುದು ಜವಾಬ್ದಾರಿಯುತ ನಾಗರಿಕತ್ವಕ್ಕೆ ಅತ್ಯಗತ್ಯ ಎಂದು ತಿಳಿಸಿದರು.
ಕಾಲೇಜಿನ ಕಾನೂನು ಸೇವಾ ಘಟಕದ ಸಂಯೋಜಕ ಡಾ. ಚೇತನಕುಮಾರ್ ಟಿ.ಎಂ. ಸ್ವಾಗತಿಸಿದರು. ಪ್ರೊ. ಸತೀಶ ಅನಿಕಿಂಡಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ್ ಉಪಸ್ಥಿತರಿದ್ದರು. ಕಾನೂನು ಸೇವಾ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಶಿವಾನಂದ ಕೋಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.