ಬೆಳಗಾವಿ: ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಸವನ ಕುಡಚಿ ಮಹಾಲಕ್ಷ್ಮೀ ನಗರ ಹಲವಾರು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೂಡಲೇ ಅಲ್ಲಿ ಮೂಲ ಸೌಲಭ್ಯ ಕಲಿಸಿಕೊಡುವಂತೆ ಆಗ್ರಹಿಸಿ ನಿವಾಸಿಗಳು ಶಾಸಕ ರಾಜು (ಆಸೀಫ್) ಶೇಠ ಅವರಿಗೆ ಮನವಿ ಸಲ್ಲಿಸಿದರು.
ಮಹಾಲಕ್ಷ್ಮೀ ನಗರದಲ್ಲಿರುವ ನಿವಾಸಿಗಳು ಶಾಸಕರ ಕಚೇರಿಗೆ ಭೇಟಿ ನೀಡಿ, ಮನವಿ ಮಾಡಿಕೊಂಡರು. ಈ ನಗರ ಪಾಲಿಕೆಯ ವ್ಯಾಪ್ತಿಯಲ್ಲಿದೆ. ಸುಮಾರು 10 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಮಹಾಲಕ್ಷ್ಮೀನಗರಕ್ಕೆ ಯಾವುದೇ ಸೌಲಭ್ಯ ದೊರೆತಿಲ್ಲ, ಇಲ್ಲಿನ ರಸ್ತೆಗಳು ತುಂಬಾ ಹದಗೆಟ್ಟುಹೋಗಿದ್ದು, ಚರಂಡಿ ಸಹ ಹಾಳಾಗಿವೆ. ಇದರಿಂದ ಮಳೆ ಬಂದಾಗ ಚರಂಡಿ ನೀರು ರಸ್ತೆಯ ಮೇಲೆಲ್ಲೆ ಹರಿದು ಜನ ಓಡಾಡುವದು ದುಸ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚರಂಡಿ ಹಾಗೂ ರಸ್ತೆ ದುರಸ್ತಿ ಮಾಡಿಸಬೇಕು. ಬೀದಿ ದೀಪಗಳ ಕೊರತೆ, ನದಿ ನೀರು ಈ ಭಾಗಕ್ಕೆ ಸರಿಯಾಗಿ ತಲುಪುತ್ತಿಲ್ಲ. ಇದರಿಂದ ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಹಿಳೆಯರು, ವಯಸ್ಕರರು ದಿವ್ಯಾಂಗರು ಮತ್ತು
ಕೂಲಿಕಾರರು ಮಧ್ಯಮ ವರ್ಗದ ಕುಟಂಬದವರು ವಾಸವಾಗಿದ್ದೇವೆ. ಶಾಸಕರು ಇಲ್ಲಿಗೆ ಮೂಲ ಸೌಕರ್ಯ ಕಲಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮಹಾಲಕ್ಷ್ಮೀ ನಗರದಿಂದ ಬೆಳಗಾವಿ ನಗರಕ್ಕೆ ಸಂಚರಿಸಲು ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಬೇಕು. ಮಹಾಲಕ್ಷ್ಮೀ ನಗರದಲ್ಲಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಶವಸಂಸ್ಕಾರವನ್ನು ಮಾಡುತ್ತಾರೆ. ಇದರಿಂದಾಗಿ ಇಲ್ಲಿನ ಶುದ್ಧವಾದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದರಿಂದ ಆರೋಗ್ಯದ ಮೇಲೆ ವೃತ್ತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಆದ್ದರಿಂದ ಶವಸಂಸ್ಕಾರ ಪ್ರದೇಶ ಬೇರೆ ಕಡೆ ಸ್ಥಳಾಂತರಿಸಬೇಕು ಒತ್ತಾಯಿಸಿದರು.
ಜನರ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಇಲ್ಲಿ ಸುಂದರವಾದ ಹೂತೋಟದ ( ವಾಯುವಿಹಾರ ) ನಿರ್ಮಾಣ ಮಾಡಬೇಕಿದೆ. ಜತೆಗೆ ಬಸವನ ಕುಡಚಿ, ಅಲಾರವಾಡ ನಡುವೆ ಒಂದು ಪೊಲೀಸ್ ಚೌಕಿ ಸ್ಥಾಪಿಸಬೇಕು. ಎಲ್ಲಾ ವರ್ಗದ ಜನರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಬೇಕು. ಮೇಲಾಗಿ ಶೀಘ್ರವೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಬಸವನ ಕುಡಚಿ ಮಹಾಲಕ್ಷ್ಮೀ ನಗರದ ನಿವಾಸಿಗಳು ಇತರರು ಇದ್ದರು.


