ಬೆಳಗಾವಿ: “ಸ್ಟಾರ್ ಏರ್” ವಿಮಾನಯಾನ ಸಂಸ್ಥೆಯು ಈ ಮುಂಚಿತವಾಗಿ ರದ್ದುಗೊಳಿಸಿದ ಬೆಳಗಾವಿ – ಮುಂಬೈ ನಡುವಿನ ವಿಮಾನಯಾನ ಸೇವೆಯನ್ನು ಪುನಃ ಪ್ರಾರಂಭ ಮಾಡಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್ ಸಂಸ್ಥೆಯು ಬೆಳಗಾವಿ – ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಇದನ್ನು ರದ್ದುಗೊಳಿಸದೆ ಇರುವ ಬಗ್ಗೆ ಕೋರಿ ಅವರು, ಸ್ಟಾರ್ ಏರ್ ಸಂಸ್ಥೆಯು ಅಧ್ಯಕ್ಷ ಸಂಜಯ ಘೋಡಾವತ್ ರವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕೋರಿದ್ದರು. ಅದರಂತೆ ಪತ್ರವನ್ನು ಸಹ ಬರೆಯಲಾಗಿತ್ತು.
ಇದರ ಫಲವಾಗಿ ಸ್ಟಾರ್ ಏರ್ ವಿಮಾನವು ಬೆಳಗಾವಿ – ಮುಂಬೈ ನಡುವೆ ವಿಮಾನ ಹಾರಾಟವನ್ನು 29ನೇ ಮಾರ್ಚ್, 2026 ರಿಂದ ಪ್ರಾರಂಭಿಸಲಿದೆ. ಇದು ಬೆಳಗಾವಿಯನ್ನು ( S5111) ಬೆಳ್ಳಿಗ್ಗೆ 07:20ಕ್ಕೆ ಬಿಟ್ಟು ಮುಂಬೈಯನ್ನು ಬೆಳಿಗ್ಗೆ 08:25ಕ್ಕೆ ತಲುಪುವುದು, ಅದರಂತೆ ಮುಂಬೈಯನ್ನು (S5112) ಸಂಜೆ 19:45ಕ್ಕೆ ಬಿಟ್ಟು ಬೆಳಗಾವಿ ನಗರವನ್ನು 20:50ಕ್ಕೆ ತಲುಪುವುದು.
ಮನವಿಗೆ ಸ್ಪಂದಿಸಿ, ಬೆಳಗಾವಿ-ಮುಂಬೈ-ಬೆಳಗಾವಿ ಮಾರ್ಗದಲ್ಲಿ ವಿಮಾನಯಾನ ಸೇವೆ ಪ್ರಾರಂಭ ಮಾಡಿ ಸಹಕರಿಸಿದ ಸ್ಟಾರ್ ಏರ್ ಸಂಸ್ಥೆಯ ಅಧ್ಯಕ್ಷ ಸಂಜಯ ಘೋಡಾವತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


