ಭೋಪಾಲ್: ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ, ಅದೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಂದು ಕಾಲದಲ್ಲಿ ಭಾರತದ ಸಾಮಾನ್ಯ ಉದ್ಯಮಿಯೊಬ್ಬರು ಸಾಲ ನೀಡಿದ್ದರು ಎಂದರೆ ನಂಬಲು ಅಸಾಧ್ಯ. ಮಧ್ಯಪ್ರದೇಶದ ಸೆಹೋರ್ ಪಟ್ಟಣದ ಶ್ರೀಮಂತ ಉದ್ಯಮಿಯೊಬ್ಬರು ಬ್ರಿಟಿಷರಿಗೆ ನೀಡಿದ್ದ ಸಾಲದ ವಿಚಾರ ಈಗ ಒಂದು ಶತಮಾನದ ನಂತರ ಮುನ್ನೆಲೆಗೆ ಬಂದಿದೆ.
ಸುಮಾರು 109 ವರ್ಷಗಳ ಹಿಂದೆ, ಅಂದರೆ 1917ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸರ್ಕಾರವು ಆಡಳಿತಾತ್ಮಕ ವೆಚ್ಚಗಳಿಗಾಗಿ ಸೆಹೋರ್ ಮತ್ತು ಭೋಪಾಲ್ ರಾಜಪ್ರಭುತ್ವದ ರಾಜ್ಯದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಉದ್ಯಮಿ ಸೇಠ್ ಜುಮ್ಮಾಲಾಲ ರುಥಿಯಾ ಅವರಿಂದ 35,000 ರೂಪಾಯಿ ಸಾಲ ಪಡೆದಿತ್ತು. ಅಂದಿನ ಕಾಲಕ್ಕೆ ಈ ಮೊತ್ತವು ಅತ್ಯಂತ ದೊಡ್ಡದಾಗಿತ್ತು. ಈ ಸಾಲವನ್ನು ‘ಯುದ್ಧ ಸಾಲ’ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಸಾಲ ನೀಡಿದ ಸುಮಾರು 20 ವರ್ಷಗಳ ನಂತರ ಸೇಠ್ ಜುಮ್ಮಲಾಲ ರುಥಿಯಾ 1937 ರಲ್ಲಿ ನಿಧನರಾದರು. ಕುಟುಂಬ ಹೇಳುವಂತೆ ಈ ವಿಷಯವು ಇತ್ಯರ್ಥವಾಗದೆ ಉಳಿದಿದೆ. ಮತ್ತು ಕ್ರಮೇಣ ತೆರೆಮರೆಗೆ ಹೋಗಿತ್ತು.
ಹೊರಬಂದ ರಹಸ್ಯ:
ಸೇಠ್ ಜುಮ್ಮಾಲಾಲ ಅವರ ಮೊಮ್ಮಗ ವಿವೇಕ ರುಥಿಯಾ ಇತ್ತೀಚೆಗೆ ತಮ್ಮ ತಂದೆಯ ನಿಧನದ ನಂತರ ಹಳೆಯ ದಾಖಲೆಗಳನ್ನು ಪರಿಶೀಲಿಸುವಾಗ ಈ ವಿಷಯ ಬೆಳಕಿಗೆ ಬಂದಿದೆ. ಕುಟುಂಬದ ಹಳೆಯ ಪತ್ರಗಳು, ಪ್ರಮಾಣಪತ್ರಗಳು ಮತ್ತು ಮರಣಶಾಸನದಲ್ಲಿ ಬ್ರಿಟಿಷರಿಗೆ ನೀಡಿದ ಈ ಸಾಲದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆದರೆ, ಬ್ರಿಟಿಷ್ ಸರ್ಕಾರ ಈ ಹಣವನ್ನು ಇದುವರೆಗೂ ಮರುಪಾವತಿಸಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
1917 ರಲ್ಲಿ 35,000 ರೂ.ಗಳು ಈಗಿನ ಮಾನದಂಡಗಳ ಪ್ರಕಾರ ಸಾಧಾರಣ ಮೊತ್ತವಾಗಿ ಕಾಣಿಸಬಹುದು, ಆದರೆ 1917ರ 35,000 ರೂಪಾಯಿಗಳ ಮೌಲ್ಯವನ್ನು ಇಂದಿನ ಚಿನ್ನದ ದರಕ್ಕೆ ಹೋಲಿಸಿದರೆ, ಅದು ಹಲವು ಕೋಟಿ ರೂಪಾಯಿಗಳಿಗೆ ಏರುತ್ತದೆ. “ನನ್ನ ಅಜ್ಜ ನೀಡಿದ ಈ ಸಾಲವನ್ನು ಮರುಪಡೆಯಲು ನಾನು ಬ್ರಿಟಿಷ್ ಸರ್ಕಾರಕ್ಕೆ ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದೇನೆ” ಎಂದು ವಿವೇಕ ರುಥಿಯಾ ತಿಳಿಸಿದ್ದಾರೆ.
ರುಥಿಯಾ ಕುಟುಂಬದ ಹಿನ್ನೆಲೆ:
ಸ್ವಾತಂತ್ರ್ಯಪೂರ್ವದಲ್ಲಿ ರುಥಿಯಾ ಕುಟುಂಬವು ಸೆಹೋರ್ ಮತ್ತು ಭೋಪಾಲ್ ಪ್ರಾಂತ್ಯದಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕುಟುಂಬವಾಗಿತ್ತು. ಇಂದಿಗೂ ಸೆಹೋರ್ ಪಟ್ಟಣದ ಶೇಕಡಾ 20 ರಿಂದ 30 ರಷ್ಟು ಭೂಮಿ ಇವರ ಹೆಸರಿನಲ್ಲಿದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಈ ಕುಟುಂಬ ಕೃಷಿ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದೆ.
ಕಾನೂನು ಹೋರಾಟದ ಹಾದಿ:
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಸಾರ್ವಭೌಮ ರಾಷ್ಟ್ರಗಳು ತಾವು ಪಡೆದ ಹಳೆಯ ಸಾಲಗಳನ್ನು ತೀರಿಸಲು ಬದ್ಧವಾಗಿರುತ್ತವೆ. ಈ ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕುಟುಂಬ ನಿರ್ಧರಿಸಿದೆ. ಇದು ಅತ್ಯಂತ ಅಪರೂಪದ ಮತ್ತು ಸಂಕೀರ್ಣವಾದ ಕಾನೂನು ಸಮರವಾಗುವ ಸಾಧ್ಯತೆಯಿದೆ.


