ಯಲ್ಲಾಪುರ : ಇಲ್ಲಿ ದರೋಡೆ ನಡೆಸಿ ಮುಂದೆ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ದರೋಡೆ ಮಾಡಲು ಯೋಜಿಸಿದ್ದ ಎಂಟು ಜನ ಅಂತಾರಾಜ್ಯ ದರೋಡೆಕೋರರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಬಳಿಯ ಕೆ ಮಿಲನ್ ಹೋಟೆಲ್ ಹತ್ತಿರ ಬುಧವಾರ ಬೆಳಗಿನ ಜಾವ ಪೋಲಿಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪಿಎಸ್ಐ ಸಿದ್ದಪ್ಪ ಗುಡಿ ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದು, ಬಂಧಿತರು ಮಹಾರಾಷ್ಟ್ರದವರು ಎನ್ನಲಾಗಿದೆ. ಬಂಧಿತ ಆರೋಪಿಗಳನ್ನು ಉಮೇಶ ರಾಮಾ ಗಾಯಕವಾಡ (35) ಪುಣೆ, ಶ್ರೀನಾಥ ಶಂಕರ ಜಾಡವ(39) ಥಾಣೆ, ಲಖನ್ ಸುಹಾಸ ಜಾದವ (30) ಪುಣೆ , ಪ್ರಶಾಂತ ಅಖಿಲ್ ಪವಾರ (35) ಥಾಣೆ, ದೀಪಕ ಚೆಂದರಲಾಲ್ ದುಂಬಾನಿ (47) ಥಾಣೆ, ಸುಂದರ ಕೈಲಾಸ ಗಾಯಕವಾಡ (50) ಥಾಣೆ, ನಾಗುಬಾಯಿ ಗಣೇಶ ಜಾದವ (50), ಥಾಣೆ, ಅಂಬಿಕಾ ಪ್ರಕಾಶ ಜಾಧವ (39)ಥಾಣೆ ಎಂದು ಗುರುತಿಸಲಾಗಿದೆ.
ಆರೋಪಿತರು ಈ ಹಿಂದೆ ದಕ್ಷಿಣ ಭಾರತದ ಪ್ರವಾಸಿ ತಾಣ ಹಾಗೂ ಪ್ರಸಿದ್ದ ದೇವಸ್ಥಾನಗಳಿಗೆ ಭೇಟಿ ನೀಡಿ ಜನಸಂದಣಿ ಇರುವ ಪ್ರದೇಶದಲ್ಲಿ ಪಿಕ್ ಪಾಕೇಟ್, ಮಹಿಳೆಯರ ಚೈನ್ ಸರ ಕಳ್ಳತನ, ಚಿನ್ನದ ಬಳೆಗಳನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಜಾತ್ರೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ಆರೋಪಿತರು ಕಳೆದ 3-4 ವರ್ಷದಿಂದ ಸತತವಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಳ್ಳತನ ದರೋಡೆ, ಸುಲಿಗೆ ಮಾಡುತ್ತಿರುವ ಗ್ಯಾಂಗ್ ಸದಸ್ಯರಾಗಿದ್ದಾರೆ ಹಾಗೂ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರ್ಡೇಶ್ವರ ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈಗ ಅವರು ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಕಳ್ಳತನ ಮಾಡುವ ಇರಾದೆಯಿಂದ ಈ ಕಡೆ ಬಂದಿರುವುದಾಗಿ ಬಾಯ್ಬಿಟಿದ್ದಾರೆ. ಆರೋಪಿತರಿಂದ 1 ಮಾರುತಿ ಎರ್ಟಿಗಾ ಕಾರು, 4 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್., ಡಿವೈಎಸ್ಪಿ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಹನಾಪುರ ಪಿಎಸ್ಐ ಶ್ರೀಧರ ಎಸ್ ಆರ್, ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಪಿಎಸ್ಐಗಳಾದ ರಾಜಶೇಖರ ವಂದಲಿ, ಅನಿಲ ಮಾದರ, ಮಹಾಂತೇಶ ಕುಂಬಾರ, ಎ ಎಸ್ ಐ ಗಜಾನನ ನಾಯ್ಕ, ಹಾಗೂ ಸಿಬ್ಬಂದಿ ಮಹಮ್ಮದ್ ಶಫೀ ಶೇಖ್, ರಾಜೇಶ ನಾಯ್ಕ, ಬಸವರಾಜ ಹಗರಿ, ಪ್ರಶಾಂತ ಪಾವುಸ್ಥರ, ಚಂದ್ರಪ್ಪ, ಶೋಭಾ ನಾಯ್ಕ, ರೇಖಾ ಎಂ. ಎಸ್. ,ಶ್ರೀಕಾಂತ ಕಟಬರ, ಪರಮೇಶ್ವರ ಬೆಂಡಗಟ್ಟಿ. ಬಸವರಾಜ ಕಂಬಳಿ, ಗಿರೀಶ ಲಮಾಣಿ, ಪರಮೇಶ್ವರ ಎಸ್. ನಾಗರಾಜ ನಾಯ್ಕ, ಸುರೇಶ, ಮಹಾವೀರ, ಚನ್ನಕೇಶವ, ರಾಚಪ್ಪ, ಗಂಗಾಧರ, ಸಂತೋಷ ಬಾಳೆ, ಹಾಗೂ ಟೆಕ್ನಿಕಲ್ ಸೆಲ್ ಕಾರವಾರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


