ಬೆಳಗಾವಿ : ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಬಣ್ಣ ಎರಚಿ ಅಪಮಾನ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಪೊಲೀಸರು ತೆರೆ ಎಳೆದಿದ್ದಾರೆ. ಒಟ್ಟಾರೆ ಇಡೀ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.
ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ದಿನಾಂಕ. 19/02/2026 ರಂದು ತುರ್ತು ಕರೆಯೊಂದು ಬಂದಿದ್ದು, ಅದರಲ್ಲಿ ಯಾರೋ ಕಿಡಿಗೇಡಿಗಳು ಯಾವುದೋ ಕಪ್ಪು ಪದಾರ್ಥವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ಹಾಕಿರುತ್ತಾರೆಂದು ಮಾಹಿತಿ ಬಂದಾಗ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಬೆಳಗಾವಿ ಗ್ರಾಮೀಣ ಠಾಣೆ ಪ್ರ ಸಂ. 47/2026 ಕಲಂ. 192 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಸ್ಥಳಕ್ಕೆ ಫಾರೆನ್ಸಿಕ್ ತಂಡದಿಂದಲೂ ಸಹ ಪರಿಶೀಲನೆ ಕೈಗೊಳ್ಳಲಾಯಿತು.
ಸಿಸಿಟಿವಿ ಫುಟೇಜ ಪರಿಶೀಲಿಸಲಾಗಿ ದಿನಾಂಕ. 18/02/2026 ರ ಸಾಯಂಕಾಲ ರಸ್ತೆಯ ಮೇಲೆ ಯಾವುದೇ ಕಲೆಗಳು ಕಂಡು ಬಂದಿರುವುದಿಲ್ಲ. ಆದರೆ ದಿನಾಂಕ. 19/02/2026 ರಂದು ಬೆಳಿಗ್ಗೆ 7.04 ಗಂಟೆಗೆ ಕಲೆಗಳು ಕಂಡು ಬಂದಿರುತ್ತವೆ. ದಿನಾಂಕ. 18/02/2026 ರ ಸಂಜೆಯಿಂದ ದಿನಾಂಕ. 19/02/2026 ರ ಬೆಳಿಗಿನ ವರೆಗೆ ಯಾವುದೇ ವ್ಯಕ್ತಿಯು ಮೂರ್ತಿಯ ಸಮೀಪ ಬಂದು ಯಾವುದೇ ವಸ್ತುವನ್ನು ಎರಚಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಿಲ್ಲ.
ಮೂರ್ತಿ, ಮೂರ್ತಿಯ ಹತ್ತಿರದ ರಸ್ತೆ ಹಾಗೂ ಮೂರ್ತಿಯ ಸ್ವಲ್ಪ ಮೇಲಿರುವ ಮರದ ಎಲೆಯ ಅಂಟು ಪದಾರ್ಥವನ್ನು ಸಂಗ್ರಹಿಸಿ ಆರ್ಎಫ್ಎಸ್ಎಲ್ಗೆ ಕಳುಹಿಸಿದ್ದು, ಸದರಿಯವರ ವರದಿಯಂತೆ ಮೂರೂ ಕಡೆಗೆ ಸಂಗ್ರಹಿಸಿದ ಸ್ಯಾಂಪಲ್ಗಳು ಮರದ ಅಂಟು ದ್ರಾವಣವಾಗಿರುತ್ತವೆ (Component Of Plant Resin) ಎಂದು ಆರ್ಎಫ್ಎಸ್ಎಲ್ ವರದಿ ನೀಡಿದೆ.
ಆದ್ದರಿಂದ ಮಸಿ ಎಂದು ಊಹಿಸಿದ ದ್ರವ ಪ್ರದಾರ್ಥವು ಮೂರ್ತಿಯ ಹತ್ತಿರವಿದ್ದ ಮರದ ಎಲೆಯ ಅಂಟು ಪದಾರ್ಥವಾಗಿರುವ ಬಗ್ಗೆ ಪರೀಕ್ಷೆಗಳಿಂದ ದೃಢಪಟ್ಟಿರುತ್ತದೆ. ಆದರೆ ಇದು ಯಾವುದೇ ಕಿಡಿಗೇಡಿಗಳ ಕೃತ್ಯವಾಗಿರುವುದಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


