ಬೆಂಗಳೂರು :
ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದ್ದು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನಿಸಿದೆ.
ಅವರನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ ನೀಡಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದ ಟ್ರಸ್ಟ್ನ ಪ್ರಮುಖರು, ಆಹ್ವಾನ ಪತ್ರಿಕೆ ನೀಡಿ ಕುಟುಂಬ ಸಮೇತವಾಗಿ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮ ಲಾಲ್ ಮತ್ತಿತರರು ಟ್ರಸ್ಟ್ ಪರವಾಗಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ಆಹ್ವಾನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿಗಳು, ಕುಟುಂಬ ಸಮೇತ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ರಾಮ್ ಲಾಲ್ ಅವರಿಗೆ ತಿಳಿಸಿದರು. ಅಲ್ಲದೆ, ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಟ್ರಸ್ಟ್ನ ಪ್ರಮುಖರು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ.
ನಟ ಯಶ್, ರಿಷಬ್ ಶೆಟ್ಟಿಗೆ ಆಹ್ವಾನ
ಕನ್ನಡದ ಖ್ಯಾತ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರಿಗೂ ರಾಮ ಮಂದಿರ ಟ್ರಸ್ಟ್ ಆಹ್ವಾನ ನೀಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಈಗಾಗಲೇ ಕಳುಹಿಸಿದೆ. ಜತೆಗೆ ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗುತ್ತಿದೆ