ಬೆಳಗಾವಿ : ಬೆಳಗಾವಿಯಲ್ಲಿ ಶುಕ್ರವಾರ ಮಹಾರಾಷ್ಟ್ರ ಏಕೀಕರಣ ಸಮಿತಿ( ಎಂಇಎಸ್) ಪ್ರತಿ ವರ್ಷ ನಡೆದುಕೊಂಡು ಬಂದಂತೆ ಮತ್ತೊಮ್ಮೆ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಯನ್ನು ಆಚರಿಸಿದೆ.
ಬೆಳಗಾವಿ ಜಿಲ್ಲಾಡಳಿತ ಮೊದಲಿನಿಂದಲೂ ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಂಇಎಸ್ ನಾಯಕರಿಗೆ ಸೂಚನೆ ನೀಡಿತ್ತು. ಆದರೆ, ಶುಕ್ರವಾರದಂದು ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಕನ್ನಡಿಗರು ಮುಳುಗಿರುವಾಗ ಎಂಎಸ್ ನಾಯಕರು ರಾಜಾರೋಷವಾಗಿ ಅದರಲ್ಲೂ ಪೊಲೀಸ್ ಭದ್ರತೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕರಾಳ ದಿನಾಚರಣೆಯನ್ನು ಆಚರಿಸಲು ಅನುವು ಮಾಡಿ ಕೊಟ್ಟಿರುವುದು ನಾನಾ ಸಂದೇಹಗಳಿಗೆ ಆಸ್ಪದ ಮಾಡಿಕೊಟ್ಟಿತು.
ಒಂದು ಕಾಲದಲ್ಲಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿ ಕನ್ನಡಿಗ ಯುವಕರೊಂದಿಗೆ ಹೆಜ್ಜೆ ಹಾಕಿ ಶ್ರೀರಾಮ ಸೇನೆಯನ್ನು ಕಟ್ಟಿ, ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಹೀನಾಯ ಸೋಲು ಅನುಭವಿಸಿದ್ದ ರಮಾಕಾಂತ ಕೊಂಡುಸ್ಕರ್ ಈ ವರ್ಷವೂ ಮತ್ತೆ ಎಂಇಎಸ್ ನಾಯಕರ ಜತೆ ಹೆಜ್ಜೆ ಹಾಕಿ ಬೆಂಬಲ ನೀಡಿದರು. ಉಳಿದಂತೆ ಮಾಜಿ ಶಾಸಕ ಮನೋಹರ ಕಿಣೇಕರ ಹಾಗೂ ಇತರ ನಾಯಕರು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಕರ್ನಾಟಕ ಸರಕಾರದ ವಿರುದ್ಧ ಎಂದಿನಂತೆ ಘೋಷಣೆ ಕೂಗಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ, ಖಾನಾಪುರ ಮಹಾರಾಷ್ಟ್ರ ಸೇರಲೇಬೇಕು ಎಂದು ಘೋಷಣೆ ಕೂಗಿದರು. ಕಪ್ಪು ಬಣ್ಣದ ಅಂಗಿ ಹಾಗೂ ಕೈಗೆ ಕಪ್ಪು ಬಟ್ಟೆಯನ್ನು ಸುತ್ತಿಕೊಳ್ಳುವ ಮೂಲಕ ತಾವು ಎಂದಿಗೂ ಕರ್ನಾಟಕ ಸೇರುವುದಿಲ್ಲ ಎಂದು ಕರ್ನಾಟಕ ಸಂದೇಶ ರವಾನಿಸಿದರು. ಒಟ್ಟಾರೆ ದೀಪಾವಳಿ ಹಾಗೂ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿರುವ ಬೆಳಗಾವಿಯಲ್ಲಿ ಇಲ್ಲದ ಗೊಂದಲ ಸೃಷ್ಟಿಸಲು ಮುಂದಾದ ಎಂಇಎಸ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು.