ಅಮ್ರೋಹಾ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಧುವೊಬ್ಬಳನ್ನು ವರಿಸಲು ಇಬ್ಬರು ವರರು ಮೆರವಣಿಗೆಯೊಂದಿಗೆ ಏಕಕಾಲಕ್ಕೆ ಮಂಟಪಕ್ಕೆ ಬಂದಿಳಿದು ಅಕ್ಷರಶಃ ಸಿನಿಮಾ ಸ್ಟೈಲ್ನಲ್ಲಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ ! ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಯಿತು.
ಅಮ್ರೋಹಾದ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಮದುವೆ ನಡೆದಿತ್ತು. ಸಂಭಲ್ ಜಿಲ್ಲೆಯ ವರನ ಸ್ವಾಗತಕ್ಕೆ ವಧುವಿನ ಕುಟುಂಬ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸರಿಯಾದ ಸಮಯಕ್ಕೆ ವರನ ಮದುವೆ ದಿಬ್ಬಣ ಬರುವಾಗಲೇ, ಪಕ್ಕದ ಮೊರಾದಾಬಾದ್ನಿಂದ ಮತ್ತೊಬ್ಬ ವರ ಅಲಂಕೃತ ಕಾರಿನಲ್ಲಿ ತನ್ನ ಕಡೆಯವರನ್ನು ಕರೆದುಕೊಂಡು ಅಲ್ಲಿ ಪ್ರತ್ಯಕ್ಷನಾಗಿದ್ದಾನೆ. “ನಾನೇ ಈಕೆಯ ಅಸಲಿ ವರ” ಎಂದು ಇಬ್ಬರೂ ವಾದಕ್ಕಿಳಿದರು. ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಮದುವೆ ಮನೆಯಲ್ಲಿ ಗೊಂದಲ ಹಾಗೂ ಉದ್ವಿಗ್ನತೆ ಸೃಷ್ಟಿಯಾಯಿತು. ಇದನ್ನು ಕಂಡ ವಧುವಿನ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಂಟಪದ ಮುಂದೆ ಎರಡು ಹೂವಿನಿಂದ ಅಲಂಕೃತಗೊಂಡ ಕಾರುಗಳು ಮತ್ತು ಇಬ್ಬರು ವರರು ಮದುವೆಗೆ ಸಜ್ಜಾಗಿ ನಿಂತಿರುವುದು ಕಂಡುಬಂದಿತು.
ಪೊಲೀಸ್ ತನಿಖೆಯ ವೇಳೆ ಹೊರಬಿದ್ದ ಅಸಲಿ ಸತ್ಯ
ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಈ ವಿಚಿತ್ರ ಸನ್ನಿವೇಶಕ್ಕೆ ಕಾರಣ ತಿಳಿದುಬಂತು. ವಧುವಿಗೆ ಈ ಮೊದಲು ಮೊರಾದಾಬಾದ್ನ ಸಂಬಂಧಿಕರೊಬ್ಬರ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ನಂತರದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಉಂಟಾಗಿ ಆ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ರದ್ದುಗೊಳಿಸಲಾಗಿತ್ತು.
ನಿಶ್ಚಿತಾರ್ಥ ಮುರಿದುಬಿದ್ದ ತಕ್ಷಣ, ಮದುವೆಗೆ ಮಾಡಿದ ಖರ್ಚು ಮತ್ತು ಇತರ ನಷ್ಟವನ್ನು ತಪ್ಪಿಸಲು ವಧುವಿನ ಪೋಷಕರು ಶೀಘ್ರವೇ ಸಂಭಲ್ನ ವ್ಯಕ್ತಿ ಜೊತೆ ಅದೇ ದಿನಾಂಕಕ್ಕೆ ಮದುವೆ ನಿಗದಿಪಡಿಸಿದ್ದರು. ಆದರೆ ನಿಶ್ಚಿರಾರ್ಥ ಮುರಿದು ಬಿದ್ದರೂ ಈಗಾಗಲೇ ಮದುವೆ ಪತ್ರಿಕೆ ಮುದ್ರಣವಾಗಿ ಅದನ್ನು ಸಂಬಂಧಿಕರಿಗೆ ಹಂಚಿರುವುದನ್ನೇ ನೆಪವಾಗಿಟ್ಟುಕೊಂಡು ಮೊರಾದಾಬಾದ್ ಕುಟುಂಬದವರು ಹಠಾತ್ತನೆ ಮಂಟಪಕ್ಕೆ ದಿಬ್ಬಣ ತಂದಿದ್ದರು.
ಪೊಲೀಸ್ ಸಂಧಾನ ಮತ್ತು ಮದುವೆ:
ಪೊಲೀಸರು ಪರಿಸ್ಥಿತಿಯನ್ನು ವಿಶ್ಲೇಷಿಸಿ, ಅಂತಿಮ ನಿರ್ಧಾರವನ್ನು ವಧುವಿನ ಕುಟುಂಬಕ್ಕೇ ಬಿಟ್ಟರು. ವಧುವಿನ ಕುಟುಂಬವು ತಾನು ಮಾಡಿಕೊಂಡ ಹೊಸ ನಿಶ್ಚಿತಾರ್ಥದಂತೆ ಸಂಭಲ್ ವರನ ಜೊತೆ ಮದುವೆ ನಡೆಸುವುದಾಗಿ ತನ್ನ ನಿರ್ಧಾರ ತಿಳಿಸಿತು. ಇದರಿಂದಾಗಿ ಮೊರಾದಾಬಾದ್ನಿಂದ ಬಂದಿದ್ದ ತಂಡವು ಯಾವುದೇ ಕಾನೂನು ಸಂಘರ್ಷಕ್ಕೆ ಇಳಿಯದೆ ಅಲ್ಲಿಂದ ತೆರಳಿತು.
ಅಂತಿಮವಾಗಿ ಎರಡೂ ಕಡೆಯವರು ಪರಸ್ಪರ ತಿಳುವಳಿಕೆಗೆ ಬಂದ ಕಾರಣ ಯಾವುದೇ ಅಧಿಕೃತ ದೂರು ದಾಖಲಾಗಲಿಲ್ಲ. ವಧುವಿನ ಪೋಷಕರು ಸಂಭಲ್ ವರನ ಜೊತೆಗೆ ಮಗಳ ಮದುವೆಯನ್ನು ಯಶಸ್ವಿಯಾಗಿ ನೆರವೇರಿಸಿದರು.


