ಬೆಂಗಳೂರು :
200 ಯೂನಿಟ್ ವಿದ್ಯುತ್ ಉಚಿತ ನೀಡಿದ್ದ ರಾಜ್ಯ ಸರಕಾರ ಇದೀಗ ವಿದ್ಯುತ್ ಬಿಲ್ ಹೆಚ್ಚಳ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ರಾಜ್ಯದ ವಿವಿಧ ವಿದ್ಯುತ್ ನಿಗಮಗಳು ವಿದ್ಯುತ್ ಬಿಲ್ ಹೆಚ್ಚಳ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದಿಟ್ಟಿರುವುದರಿಂದ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೆ ಇನ್ನಷ್ಟು ಬಿಲ್ ಹೊರೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್ಗೆ 50ರಿಂದ 60 ಪೈಸೆಯಷ್ಟು ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಪ್ರಸ್ತಾವನೆ ಸಲ್ಲಿಸಿವೆ.
ಯುನಿಟ್ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು ಕೆಇಆರ್ ಸಿಯು ಪರಿಶೀಲನೆ ನಡೆಸಿ ಬೆಸ್ಕಾಂ ಹಾಗೂ ಗ್ರಾಹಕರು ಇಬ್ಬರಿಗೂ ಹೊರೆಯಾಗದ ರೀತಿ ಯಲ್ಲಿ ಸದ್ಯದಲ್ಲೇ ದರ ಪರಿಷ್ಕರಣೆ ಮಾಡಲಿದೆ. ಪರಿಷ್ಕೃತ ದರವು 2024ರ ಏ.1ರಿಂದ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇತರೆ ಎಸ್ಕಾಂಗಳಿಂದಲೂ ದರ ಪರಿಷ್ಕರಣೆಗೆ
ಪ್ರಸ್ತಾಪ:
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಟ್-ಮೈಸೂರು) ಸಹ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ. ಕೆಇಆರ್ಸಿ ಮೂಲಗಳ ಪ್ರಕಾರ ನಾಲ್ಕೂ ಎಸ್ಕಾಂಗಳು ಪ್ರತಿ ಯುನಿಟ್ಗೆ 50 ರಿಂದ 60 ಪೈಸೆಯಷ್ಟು ವಿದ್ಯುತ್ ದರ ಪರಿಷ್ಕರಣೆಗೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ.
ಕಲ್ಲಿದ್ದಲು ಖರೀದಿ, ವಿದ್ಯುತ್ ಖರೀದಿ ಹಾಗೂ ವಿದ್ಯುತ್ ಸರಬರಾಜು ವೆಚ್ಚ ಸೇರಿ ದಂತೆ ಹಲವು ಕಾರಣಗಳಿಂದ ನಿರ್ವಹಣೆಗೆ ಹೊರೆಯಾಗುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು 2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೆಇಆರ್ಸಿಗೆ ಮನವಿ ಮಾಡಿವೆ.