ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳು ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತವೆ. ಅಲ್ಲಿನ ಜಿಲ್ಲಾಡಳಿತಗಳು ವ್ಯವಸ್ಥಿತ ಹಾಗೂ ಅತ್ಯಂತ ಅಚ್ಚುಕಟ್ಟಾಗಿ ಉತ್ಸವಗಳನ್ನು ಆಚರಿಸುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ರಾಣಿ ಚನ್ನಮ್ಮಳ ಹೆಸರಿನ ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ, ಸಂಗೊಳ್ಳಿ ರಾಯಣ್ಣ ಉತ್ಸವ, ಹಂಪಿ, ಕನಕಗಿರಿ ಉತ್ಸವ ಮಾದರಿಯಂತಿವೆ. ಬೆಳಗಾವಿ ಜಿಲ್ಲಾ ಆಡಳಿತ ಎಲ್ಲಿಯೂ ಒಂದು ಲೋಪ ದೋಷ ಎದುರಾಗದಂತೆ ಅರ್ಥಪೂರ್ಣ ರೀತಿಯಲ್ಲಿ ಉತ್ಸವಗಳನ್ನು ನಡೆಸಿ ಜನರ ಮೆಚ್ಚುಗೆ ಪಡೆಯುತ್ತಿದೆ. ಹಂಪಿ ಉತ್ಸವ, ಕನಕಗಿರಿ ಉತ್ಸವ ಇತ್ತೀಚೆಗೆ ನಡೆದಿದ್ದು ಸಂಬಂಧಿಸಿದ ಜಿಲ್ಲಾಡಳಿತಗಳು ವ್ಯವಸ್ಥಿತವಾಗಿ ಆ ಉತ್ಸವಗಳನ್ನು ನಡೆಸಿವೆ. ಜೊತೆಗೆ ಸ್ಥಳೀಯ ಪತ್ರಿಕೆಗಳಿಗೆ ಎಂದಿನಂತೆ ಜಾಹೀರಾತು ನೀಡಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕದಂಬೋತ್ಸವ ಕಾಲಕ್ಕೆ ಸ್ಥಳೀಯ ಹಾಗೂ ಹಳೆಯ ಪತ್ರಿಕೆಗಳಿಗೆ ಜಾಹೀರಾತು ನೀಡದೇ ಇರುವ ಸಂಬಂಧಿಸಿದ ಶಿರಸಿ ಉಪವಿಭಾಗಾಧಿಕಾರಿ ವರ್ತನೆ ಮಾತ್ರ ಅತ್ಯಂತ ಖಂಡನೀಯ.
ಕಾರವಾರ / ಶಿರಸಿ ಜನ ಜೀವಾಳ ಜಾಲ:
ಕದಂಬೋತ್ಸವ ಜಾಹೀರಾತು ನೀಡಲು ಅಧಿಕಾರಿಗಳ ಸ್ಪಂದನೆ ಇಲ್ಲ . ಇದು ಶಿರಸಿ ಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ.
ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಪತ್ರಿಕೆಗಳ ಸಂಪಾದಕರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೆ ಕ್ಯಾರೆ ಎನ್ನದಂತೆ ವರ್ತಿಸುತ್ತಿರುವುದನ್ನು ಜಿಲ್ಲಾಧಿಕಾರಿಗಳು ಇನ್ನಾದರು ಗಮನಿಸಬೇಕಿದೆ. ಪುಟಗಟ್ಟಲೇ ಸುದ್ದಿಗಳನ್ನು ಹಾಕಿಸಿಕೊಳ್ಳುವ ಅಧಿಕಾರಿಗಳಿಗೆ ವರ್ಷಕ್ಕೊಂದು ಸಲ ಬರುವ ಕದಂಬೋತ್ಸವದ ಜಾಹೀರಾತು ಕೊಡುವುದು ನೆನಪಾಗುವುದಿಲ್ಲವೇ? ಎನ್ನುವುದು ಈಗ ಯಕ್ಷಪ್ರಶ್ನೆ.
ಕದಂಬರು ಕನ್ನಡದ ಮೊದಲ ರಾಜ ಮನೆತನ. ಆದರೆ ಶ್ರೇಷ್ಢ ರಾಜ ಮನೆತನದ ಹೆಸರಿನಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ರಾಜ್ಯ ಸರಕಾರ ಆಡಂಬರದ ಕದಂಬೋತ್ಸವ ಮಾಡುತ್ತಿದೆ. ಆದರೆ ಅಧಿಕಾರಿಗಳ ಘೋರ ನಿರ್ಲಕ್ಷದ ಫಲವಾಗಿ ಕದಂಬೋತ್ಸವ ಮಾತ್ರ ವರ್ಷದಿಂದ ವರ್ಷಕ್ಕೆ ತನ್ನ ನೈಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಮಾತ್ರ ದುರಂತದ ಸಂಗತಿ. ಕದಂಬೋತ್ಸವ ಏರ್ಪಡಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿ ವರ್ಗ ಪ್ರತಿ ವರ್ಷ ತನ್ನ ಬೇಜವಾಬ್ದಾರಿಯನ್ನು ಮೆರೆಯುತ್ತಿದೆ. ಈ ವರ್ಷವೂ ಅದರ ಮುಂದುವರಿದ ಅಧ್ಯಾಯ ಎಂಬಂತೆ ಅಧಿಕಾರಿಗಳು ತಮ್ಮ ಉದಾಸೀನತೆಯನ್ನು ಮುಂದುವರಿಸಿದ್ದಾರೆ.
ಶಿರಸಿಯ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಅಧಿಕಾರಿ ವರ್ಗಕ್ಕೆ ಮಾರ್ಗದರ್ಶನ ಮಾಡಬೇಕಿತ್ತು, ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಈ ಅಧಿಕಾರಿ ಮಾತ್ರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದ್ದಾರೆ. ಕದಂಬೋತ್ಸವ ಮಾಡಲು ಯಾವ ಪೂರ್ವ ತಯಾರಿಯನ್ನು ಮಾಡಿಲ್ಲ ಎಂಬ ಬಲವಾದ ಆರೋಪ ಈ ಸಲವು ಸಾರ್ವಜನಿಕರಿಂದ ಕೇಳಿ ಬಂದಿದೆ. ಇದೀಗ ಕದಂಬೋತ್ಸವ ನಡೆಯುವ ವೇಳೆ ಅಂತಹ ನಿರ್ಲಕ್ಷತೆಯನ್ನು ಮತ್ತೆ ಮಾಡಿದ್ದಾರೆ. ಶಿರಸಿಯ ಕಾಮಕರ ಎಂಬ ಅಧಿಕಾರಿ ಈ ನಿಟ್ಟಿನಲ್ಲಿ ಸಂಪರ್ಕ ಸಾಧಿಸಿ ಎಲ್ಲಾ ಪತ್ರಿಕೆಗಳಿಗೆ ಸರಿ ಸಮನಾಗಿ ಜಾಹೀರಾತು ನೀಡಲು ಮುಂದಾಗಬೇಕಿತ್ತು. ಆದರೆ ಕಳೆದ ನಾಲ್ಕಾರು ದಿನಗಳಿಂದ ಪತ್ರಿಕೆಗಳ ಸಂಪಾದಕರು ಒಂದೇ ಸಮನೆ ಮೊಬೈಲ್ ಕರೆ ಮಾಡುತ್ತಿದ್ದರೂ ಈ ಅಧಿಕಾರಿ ಮಾತ್ರ ತನಗೂ ಹಾಗೂ ಕದಂಬೋತ್ಸವಕ್ಕೆ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಪತ್ರಿಕಾ ಸಂಪಾದಕರು ತಮ್ಮ ಅಮೂಲ್ಯ ಸಮಯವನ್ನು ತೆಗೆದಿಟ್ಟು ಅಧಿಕಾರಿಗೆ ಫೋನ್ ಕರೆ ಮಾಡಿದರೆ ಸ್ವೀಕರಿಸದ ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಬೇರೆ ಕಡೆ ವರ್ಗಾಯಿಸಬೇಕು ಎಂದು ಪತ್ರಿಕಾ ಸಂಪಾದಕರು ಶಿರಸಿಯ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯಕ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಶಿರಸಿಯ ಮಾಜಿ ಶಾಸಕರು ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಿಗಳು ಪ್ರತಿ ವರ್ಷ ಮಾಡುವ ಇಂತಹ ಯಡವಟ್ಟಿಗೆ
ಸರಿಯಾದ ಶಾಸ್ತಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಧಿಕಾರಿ ವರ್ಗ ತಾವು ಮಾಡಿದ್ದೆ ಆಟ ಎಂಬ ಪರಂಪರೆ ಪ್ರತಿ ವರ್ಷ ಮುಂದುವರಿಯುವುದರಲ್ಲಿ ಎರಡು ಮಾತಿಲ್ಲ.