ಬೆಳಗಾವಿ: ರಾಜ್ಯ ಸಚಿವ ಸಂಪುಟದಲ್ಲಿ ಬೆಳಗಾವಿ ಜಿಲ್ಲೆಗೆ ಈ ಬಾರಿ ಮೂರು ಸಚಿವ ಸ್ಥಾನ ನೀಡಲೇಬೇಕು ಎಂಬ ಬಿಗಿಪಟ್ಟು ಆರಂಭವಾಗಿದೆ.
ಬೆಳಗಾವಿ ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆ. ಹೀಗಾಗಿ ಜಿಲ್ಲೆಯ ಗಾತ್ರಕ್ಕೆ ತಕ್ಕಂತೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆದ್ಯತೆ ನೀಡಬೇಕು ಎಂಬ ಕೂಗು ಜೋರಾಗಿ ಮೊಳಗಿದೆ.
ಸದ್ಯ ಸತೀಶ ಜಾರಕಿಹೊಳಿ ಅವರಿಗೆ ಸ್ಥಾನ ನೀಡಲಾಗಿದೆ. ಮುಂದಿನ ದಿನಮಾನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಆ ಸಂದರ್ಭದಲ್ಲಿ ಇನ್ನು ಎರಡು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ರಾಜಕೀಯ ಕ್ಷೇತ್ರದ ಅಪಾರ ಅನುಭವಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆದ್ಯತೆ ನೀಡಬೇಕು. ಯಾಕೆಂದರೆ ಈ ಹಿಂದೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಸಂದರ್ಭದಲ್ಲಿ ಯೋಗ್ಯ ಸ್ಥಾನಮಾನದ ಭರವಸೆ ನೀಡಿ ಕರೆತರಲಾಗಿತ್ತು. ಹೀಗಾಗಿ ಅವರಿಗೆ ಈ ಬಾರಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಾಕಷ್ಟು ಸಲ ಉಲ್ಲೇಖಿಸಿದ್ದಾರೆ. ಹೀಗಾಗಿ ಅವರ ಅವರಿಗೆ ಸಚಿವ ಸ್ಥಾನ ಕೈ ತಪ್ಪದಂತೆ ನೋಡಿಕೊಳ್ಳಬೇಕಾದ ಬಹುದೊಡ್ಡ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.
ಹಿಂದಿನ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳಾ ಕೋಟಾದಡಿ ಮತ್ತೆ ಸಚಿವರಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಹಿರಿತನದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ನೀಡಬೇಕು ಎಂಬ ಆಶಯ ಹೊಂದಿದ್ದಾರೆ. ಈ ಹಿಂದೆಯೂ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸಚಿವ ಸ್ಥಾನ ನೀಡಬೇಕೆಂದು ನಾನು ಚಿಕ್ಕ ಮಕ್ಕಳಂತೆ ಹಠ ಹಿಡಿಯುವುದಿಲ್ಲ, ನನಗೆ ಸ್ವಾಭಿಮಾನವೇ ಬಹಳ ಮುಖ್ಯ ಎಂದು ಘಂಟಾಘೋಷವಾಗಿ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಯುತವಾಗಿ ಹಿರಿಯ ಕಾಂಗ್ರೆಸ್ ನಾಯಕರು ಆಗಿರುವ ಅಶೋಕ ಪಟ್ಟಣ ಅವರಿಗೆ ಯೋಗ್ಯ ಹುದ್ದೆ ನೀಡಬೇಕಿತ್ತು. ಮುಂಬರುವ ದಿನಗಳಲ್ಲಿ ಈ ಹಿರಿಯ ಹಾಗೂ ನಿಷ್ಠಾವಂತ ನಾಯಕನಿಗೆ ಪಕ್ಷ ಗುರುತಿಸುವಂತೆ ಜವಾಬ್ದಾರಿ ನೀಡಬೇಕಾಗಿದೆ. ಇನ್ನುಳಿದಂತೆ ಬೈಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಅವರು ಸಚಿವ ಹುದ್ದೆ ಸಿಕ್ಕಲ್ಲಿ ಯೋಗ್ಯ ರೀತಿಯಿಂದ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಬೆಳಗಾವಿ ಉತ್ತರ ಶಾಸಕ ಮೊದಲ ಬಾರಿ ಆಯ್ಕೆಯಾಗಿದ್ದು ಅಲ್ಪಸಂಖ್ಯಾತ ಕೋಟಾದಡಿ ಸಚಿವರಾಗುವ ಉಮೇದಿನಲ್ಲಿದ್ದಾರೆ.
ಮುಂದಿನ ತಿಂಗಳಿನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಯಾವ ಕಾಂಗ್ರೆಸ್ ಶಾಸಕರಿಗೆ ಆದ್ಯತೆ ನೀಡಬಹುದು ಎಂದು ಕಾದು ನೋಡಬೇಕಾಗಿದೆ.