ಬೆಂಗಳೂರು:
"ಎರಡನೇ ವಿಮಾನ ನಿಲ್ದಾಣ ಬೆಂಗಳೂರು ದಕ್ಷಿಣದಲ್ಲೇ ಆಗಲಿದ್ದು, ಊರುಗಳನ್ನು ಸ್ಥಳಾಂತರ ಮಾಡದಂತೆ ಜಾಗ ಹುಡುಕಲು ಸೂಚನೆ ನೀಡಲಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಎರಡನೇ ವಿಮಾನ ನಿಲ್ದಾಣ ಸಂಬಂಧ ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
"ಎರಡನೇ ವಿಮಾನ ನಿಲ್ದಾಣ ಸಂಬಂಧ ಇದುವರೆಗೂ ಏನೆಲ್ಲಾ ಆಗಿದೆ ಎಂಬ ಪ್ರಸ್ತಾವನೆ ನೀಡಿದ್ದಾರೆ. ಊರುಗಳು ಒಕ್ಕಲೆಬ್ಬಿಸದೇ ಗುಡ್ಡಗಳು ಇಲ್ಲದಿರುವ ಕಡೆ, ಕಡಿಮೆ ಜಾಗದಲ್ಲಿ ತಾಂತ್ರಿಕವಾಗಿ ಕಾರ್ಯಸಾಧುವಾಗಿರುವ ಜಾಗ ನೋಡುವಂತೆ ಸೂಚಿಸಿದ್ದೇನೆ. ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ" ಎಂದು ತಿಳಿಸಿದರು.
ಯಾವ ಜಾಗದಲ್ಲಿ ಮಾಡಲಾಗುವುದು ಎಂದು ಕೇಳಿದಾಗ, "ಬಹುತೇಕ ಬೆಂಗಳೂರು ದಕ್ಷಿಣದಲ್ಲೇ ಆಗಲಿದೆ. ಈಗ ಕೊಟ್ಟಿರುವ ಪ್ರಸ್ತಾವನೆಗಳು ದಕ್ಷಿಣದ್ದೇ ಆಗಿವೆ. ಭೂಮಿ ಬೆಲೆ ಕಡಿಮೆ ಇರಬೇಕು, ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗಬಾರದು" ಎಂದು ತಿಳಿಸಿದರು.